10 ನೆಯ ತರಗತಿ ಪ್ರಥಮಭಾಷೆ ಕನ್ನಡ.
ಪದ್ಯ-೦೧ ಸಂಕಲ್ಪ ಗೀತೆ
ಕೃತಿಕಾರರ ಪರಿಚಯ:
ಜಿ.ಎಸ್.ಶಿವರುದ್ರಪ್ಪ ಇವರು ಸಾ. ಶ. ೧೯೨೬ ರಲ್ಲಿ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದಲ್ಲಿ ಜನಿಸಿದರು. ಇವರ ಪೂರ್ಣ ಹೆಸರು: ಗುಗ್ಗರಿ ಶಾಂತವೀರಪ್ಪ ಶಿವರುದ್ರಪ್ಪ.
ಇವರು ‘ಸಾಮಗಾನ’, ‘ಚೆಲುವು-ಒಲವು’, ‘ದೇವಶಿಲ್ಪ’, ‘ದೀಪದ ಹೆಜ್ಜೆ’, ‘ಅನಾವರಣ’, ‘ವಿಮರ್ಶೆಯ ಪೂರ್ವಪಶ್ಚಿಮ’, ‘ಮಾಸ್ಕೋದಲ್ಲಿ ಇಪ್ಪತ್ತೆರಡು ದಿನಗಳು’, ‘ಸೌಂದರ್ಯ ಸಮೀಕ್ಷೆ’.ಕೃತಿಗಳನ್ನು ರಚಿಸಿದ್ದಾರೆ
ಇವರಿಗೆ ‘ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ‘ನಾಡೋಜ’ ಪ್ರಶಸ್ತಿ, ‘ಗೌರವ ಡಿ.ಲಿಟ್’ ಪ್ರಶಸ್ತಿ.‘ರಾಷ್ಟ್ರ ಕವಿ’ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗಿದೆ.
ಕೆಳಗಿನ ಪ್ರಶ್ನೆಗಳಿಗೆ ಒಂದೊಂದು ವಾಕ್ಯದಲ್ಲಿ ಉತ್ತರಿಸಿ.
೧. ಯಾವುದನ್ನು ಎಚ್ಚರದಲ್ಲಿ ಮುನ್ನಡೆಸಬೇಕು?
ಬಿರುಗಾಳಿಗೆ ಹೊಯ್ದಾಡುವ ಹಡಗನ್ನು ಎಚ್ಚರದಲ್ಲಿ ಮುನ್ನಡೆಸಬೇಕು.
೨. ನದೀಜಲಗಳು ಏನಾಗಿವೆ?
ನದೀಜಲಗಳು ಕಲುಷಿತವಾಗಿವೆ.
೩. ಯಾವುದಕ್ಕೆ ಮುಂಗಾರಿನ ಮಳೆಯಾಗಬೇಕು?
ಕಲುಷಿತವಾಗಿರುವ ನದೀಜಲಗಳಿಗೆ ಮುಂಗಾರಿನ ಮಳೆಯಾಗಬೇಕು.
೪. ಕಾಡುಮೇಡುಗಳ ಸ್ಥಿತಿ ಹೇಗಿದೆ?
ಕಾಡುಮೇಡುಗಳು ಬರಡಾಗಿವೆ.
೫. ಯಾವ ಎಚ್ಚರದೊಳು ಬದುಕಬೇಕಿದೆ?
ಮತಗಳೆಲ್ಲವೂ ಪಥಗಳು ಎನ್ನುವ ಹೊಸ ಎಚ್ಚರದೊಳು ಬದುಕಬೇಕಿದೆ.
ಕೆಳಗಿನ ಪ್ರಶ್ನೆಗಳಿಗೆ ಮೂರು-ನಾಲ್ಕು ವಾಕ್ಯಗಳಲ್ಲಿ ಉತ್ತರ ಬರೆಯಿರಿ.
೧. ಹಡಗನ್ನು ಯಾವುದರ ಬೆಳಕಿನಲ್ಲಿ ಮುನ್ನಡೆಸಬೇಕಿದೆ?
ನಮ್ಮ ಬದುಕಿನ ಸುತ್ತಮುತ್ತಲು ಕವಿದಿರುವ ದ್ವೇಷವೆಂಬ ಕತ್ತಲೆಯನ್ನು ಕಳೆಯಲು ಪ್ರೀತಿಯೆಂಬ ಹಣತೆಯನ್ನು ಹಚ್ಚಬೇಕು. ಸಂಸಾರ ಸಾಗರದಲ್ಲಿ ಬಿರುಗಾಳಿಗೆ ಸಿಲುಕಿ ಹೊಯ್ದಾಡುತ್ತಿರುವ ಬದುಕೆಂಬ ಹಡಗನ್ನು ಜ್ಞಾನದೀವಿಗೆಯ ಮೂಲಕ ಎಚ್ಚರಿಕೆಯಿಂದ ಮುನ್ನಡೆಸಬೇಕಿದೆ.
೨. ಕಾಡುಗಳಿಗೆ ಹೇಗೆ ಮುಟ್ಟಬೇಕಿದೆ?
ಇಂದು ಕಾಡುಮೇಡುಗಳು ಬರಡಾಗಿವೆ. ಅವು ಚಿಗುರಬೇಕಾದರೆ ಋತುಗಳ ರಾಜನಾದ ವಸಂತನು ಆಗಮಿಸಿದಾಗ ಕಾಡುಗಳು ಹೇಗೆ ಸಮೃದ್ಧಿಯಿಂದ ಹಚ್ಚಹಸಿರಿನಿಂದ ಕಂಗೊಳಿಸುವುದೋ ಹಾಗೆ ಕಾಡುಗಳಿಗೆ ಮುಟ್ಟಬೇಕಿದೆ. ಅಂದರೆ ಗಿಡಮರಗಳನ್ನು ಬೆಳೆಸುವ ಹಾಗೂ ಸಂರಕ್ಷಿಸುವ ಕೆಲಸ ಮಾಡಬೇಕಿದೆ ಎಂಬುದು ಕವಿಯ ಆಶಯವಾಗಿದೆ.
೩. ಹೊಸ ಭರವಸೆಗಳನ್ನು ಮೂಡಿಸಿ ಯಾವುದರ ನಡುವೆ ಸೇತುವೆಯಾಗಬೇಕಿದೆ?
ಭಾಷೆ, ಜಾತಿ, ಮತಧರ್ಮಗಳ ಭೇದಭಾವದಿಂದ ಮನುಜರ ನಡುವೆ ಅಡ್ಡಗೋಡೆಗಳು ನಿರ್ಮಾಣವಾಗಿವೆ, ಸ್ನೇಹ, ಪ್ರೀತಿ, ನಂಬಿಕೆಯ ಮೂಲಕ ಮನುಜರ ನಡುವಿನ ಈ ಅಡ್ಡಗೋಡೆಗಳನ್ನು ಕೆಡವಬೇಕು. ಬದುಕಿನಲ್ಲಿ ಹೊಸ ಭರವಸೆಗಳನ್ನು ಮೂಡಿಸಿ ಮನುಜ ಮನುಜರ ನಡುವೆ ಸೇತುವೆಯಾಗಬೇಕಿದೆ.
೪. ನಾಳಿನ ಕನಸನ್ನು ಬಿತ್ತಬೇಕಾದರೆ ನಾವು ಹೇಗೆ ಬದುಕಬೇಕು?
ಎಲ್ಲ ಮತಧರ್ಮಗಳು ದಾರಿ ತೋರಿಸುವ ದೀಪಗಳಾಗಿರುವುದರಿಂದ ಎಲ್ಲಾ ಮತಗಳನ್ನು ಪುರಸ್ಕರಿಸುವ ಎಚ್ಚರಿಕೆಯಲ್ಲಿ ನಾವು ಬದುಕಬೇಕು. ಭಯ ಮತ್ತು ಸಂಶಯಗಳಿAದ ಮಸುಕಾಗಿರುವ ಮನದ ಕಣ್ಣಿನಲ್ಲಿ ಭವಿಷ್ಯದ ಕನಸ್ಸನ್ನು ಬಿತ್ತುತ್ತ ಬದುಕು ನಡೆಸಬೇಕು.
ಕೆಳಗಿನ ಪ್ರಶ್ನೆಗಳಿಗೆ ಎಂಟು-ಹತ್ತು ವಾಕ್ಯಗಳಲ್ಲಿ ಉತ್ತರ ಬರೆಯಿರಿ.
೧. ನಾವು ಯಾವ ಸಂಕಲ್ಪ ಕೈಗೊಳ್ಳಬೇಕೆಂಬುದು ಕವಿ ಶಿವರುದ್ರಪ್ಪನವರ ಆಶಯವಾಗಿದೆ?
‘ನಮ್ಮ ಸುತ್ತಲು ಹಬ್ಬಿರುವ ದ್ವೇಷದ ಕತ್ತಲೆಯನ್ನು ಕಳೆಯಲು ಪ್ರೀತಿಯ ದೀಪವನ್ನು ಹಚ್ಚಬೇಕು. ಸಂಸಾರ ಸಾಗರದಲ್ಲಿ ಬಿರುಗಾಳಿಗೆ ಸಿಲುಕಿ ಹೊಯ್ದಾಡುತ್ತಿರುವ ಬದುಕೆಂಬ ಹಡಗನ್ನು ಎಚ್ಚರದಲ್ಲಿ ಮುನ್ನಡೆಸಬೇಕು. ಪರಿಸರ ಮಾಲಿನ್ಯದಿಂದ ಕಲುಷಿತವಾಗಿರುವ ನದೀಜಲಗಳಿಗೆ ಶುದ್ಧೀಕರಿಸುವ ಮುಂಗಾರಿನ ಮಳೆಯಾಗಬೇಕು. ಬರಡಾಗಿರುವ ಕಾಡುಮೇಡುಗಳು ಹಚ್ಚಹಸಿರಿನಿಂದ ಕಂಗೊಳಿಸಿ, ಸಮೃದ್ಧವಾಗುವಂತಹ
ವಸಂತ ಕಾಲವಾಗಬೇಕು. ಅತ್ಯಾಚಾರ, ಅನಾಚಾರ, ಭ್ರಷ್ಟಾಚಾರ, ಅಸ್ಪ್ರಶ್ಯತೆ, ಅಸಮಾನತೆಗಳಿಂದ ಅಧಃಪತನಗೊಂಡಿರುವ ಸಮಾಜವನ್ನು ಹೊಸ ಭರವಸೆಗಳ ಮೂಲಕ ಮೇಲೆತ್ತುವಂತಾಗಬೇಕು. ಭಾಷೆ, ಜಾತಿ, ಮತ, ಧರ್ಮಗಳ ಭೇದಭಾವದಿಂದ ಮನುಜ ಮನುಜರ ನಡುವೆ ಉಂಟಾಗಿರುವ ಅಸಮಾನತೆಯ ಅಡ್ಡಗೋಡೆಗಳನ್ನು ಕೆಡವಿ, ಸಮಾನತೆಯ ಮನೋಭಾವನೆಯನ್ನು ಮೂಡಿಸುವ ಸೇತುವೆಯಾಗಬೇಕು, ಎಲ್ಲ ಮತಗಳು ಸಾಧನೆಯ ದಾರಿಗಳು ಎಂಬ ಎಚ್ಚರದಲ್ಲಿ ಬದುಕುವಂತಾಗಬೇಕು. ಭಯ ಹಾಗೂ ಸಂಶಯಗಳಿಂದ ಮಸುಕಾದ ಕಣ್ಣುಗಳಲ್ಲಿ ಭವಿಷ್ಯದ ಹೊಂಗನಸು ಕಾಣುವಂತೆ ಆಗಬೇಕು. ಇವೆಲ್ಲವೂ ಆಗುವಂತೆ ದೃಢಸಂಕಲ್ಪ ವನ್ನು ಕೈಗೊಳ್ಳಬೇಕು’ ಎನ್ನುವುದು ಕವಿ ಜಿ. ಎಸ್. ಶಿವರುದ್ರಪ್ಪ ಅವರ ಆಶಯವಾಗಿದೆ.
೨. ಸಂಕಲ್ಪ ಮತ್ತು ಅನುಷ್ಠಾನದ ಕುರಿತು ಕವಿ ಶಿವರುದ್ರಪ್ಪನವರ ಅಭಿಪ್ರಾಯವನ್ನು ವಿವರಿಸಿ.
ನಾವು ಜೀವನದಲ್ಲಿ ಪ್ರೀತಿಯ ದೀಪವನ್ನು ಹಚ್ಚುವುದರಿಂದ ದ್ವೇಷರಹಿತ ಸಮಾಜ ನಿರ್ಮಾಣ ಮಾಡಬಹುದು. ಬದುಕಿನಲ್ಲಿ ಎಚ್ಚರಿಕೆಯಿಂದ ಮುನ್ನಡೆಯುವುದರಿಂದ ಎಂತಹ ಸವಾಲುಗಳನ್ನು ಸಹ ಧೈರ್ಯವಾಗಿ ಎದುರಿಸಬಹುದು. ಮುಂಗಾರಿನ ಮಳೆಯಂತೆ ಪರಿಸರ ಸಂರಕ್ಷಿಸುವುದರಿಂದ ನದೀಜಲಗಳನ್ನು ಶುದ್ಧವಾಗಿ ಇಟ್ಟುಕೊಳ್ಳಬಹುದು. ವನಸಂರಕ್ಷಣೆ ಮಾಡುವುದರಿಂದ ಕಾಡುಗಳು ಹಚ್ಚಹಸುರಿನಿಂದ
ಸಮೃದ್ಧವಾಗುವಂತೆ ಮಾಡಬಹುದು, ಹೊಸ ಭರವಸೆಗಳನ್ನು ಮೂಡಿಸುವುದರಿಂದ ಸಮಾಜದ ನೈತಿಕ ಅಧಃಪತನವನ್ನು ತಡೆಯಬಹುದು. ಸಮಾನ ಮನೋಭಾವನೆಯುಳ್ಳವರಾಗುವುದರಿಂದ ಮನುಜ ಮನುಜರ ನಡುವಿನ ಅಸಮಾನತೆಯ ಅಡ್ಡಗೋಡೆಗಳನ್ನು ಕೆಡುಹಬಹುದು. ಎಲ್ಲ ಮತಗಳು ಸಾಧನೆಯ ದಾರಿಗಳು ಎಂಬ ಎಚ್ಚರದಲ್ಲಿ ಬದುಕುವುದರಿಂದ ದೇಶದಲ್ಲಿ ಶಾಂತಿಯು ನೆಲೆಸುವಂತೆ ಮಾಡಬಹುದು. ಭಯ ಹಾಗೂ
ಸಂಶಯಗಳಿಂದ ಮುಕ್ತರಾಗುವುದರಿಂದ ಭವಿಷ್ಯದ ಹೊಂಗನಸನ್ನು ಕಾಣಬಹುದು. ಹೀಗೆ ಕವಿ ಶ್ರೀ ಜಿ.ಎಸ್. ಶಿವರುದ್ರಪ್ಪನವರು ಸಂಕಲ್ಪ ಮತ್ತು ಅನುಷ್ಠಾನವನ್ನು ಕುರಿತು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾರೆ.
ಈ ಕೆಳಗಿನ ವಾಕ್ಯ ಅಥವಾ ಹೇಳಿಕೆಗಳಿಗೆ ಸಂದರ್ಭ ಸಹಿತ ಸ್ವಾರಸ್ಯವನ್ನು ವಿವರಿಸಿ.
೧. ‚ಪ್ರೀತಿಯ ಹಣತೆಯ ಹಚ್ಚೋಣ''
ಆಯ್ಕೆ: ಈ ವಾಕ್ಯವನ್ನು ಕವಿ ಶ್ರೀ ಜಿ.ಎಸ್.ಶಿವರುದ್ರಪ್ಪ ಅವರು ರಚಿಸಿರುವ `ಎದೆತುಂಬಿ ಹಾಡಿದೆನು' ಕವನ ಸಂಕಲನದಿಂದ ಆಯ್ದ‘ಸಂಕಲ್ಪ ಗೀತೆ’ ಎಂಬ ಕವಿತೆಯಿಂದ ಆರಿಸಲಾಗಿದೆ.
ಸಂದರ್ಭ: ಕವಿ ಜಿ.ಎಸ್.ಶಿವರುದ್ರಪ್ಪನವರು ಸಮಾಜದಲ್ಲಿ ಹರಡಿರುವ ದ್ವೇಷ ಎಂಬ ಕತ್ತಲೆಯ ಬಗ್ಗೆ ತಿಳಿಸುತ್ತಾ ಆ ಕತ್ತಲೆಯನ್ನು ಹೋಗಲಾಡಿಸಲು ಪ್ರೀತಿ ಎಂಬ ಹಣತೆಯನ್ನು ಹಚ್ಚಬೇಕು. ನಮ್ಮ ಜೀವನವೆಂಬ ಹಡಗು ಬಿರುಗಾಳಿಗೆ ಹೊಯ್ದಾಡುತ್ತಿದೆ ಅದನ್ನು ಎಚ್ಚರದಿಂದ ಮುನ್ನಡೆಸಬೇಕು ಎಂದು ಹೇಳುವ ಸಂದರ್ಭದಲ್ಲಿ ಈ ಮಾತನ್ನು ಹೇಳುತ್ತಾರೆ.
ಸ್ವಾರಸ್ಯ: ನಾವು ಜೀವನದಲ್ಲಿ ಪ್ರೀತಿಯ ಹಣತೆಯನ್ನು ಹಚ್ಚುವ ಸಂಕಲ್ಪ ಕೈಗೊಳ್ಳುವುದರಿಂದ ದ್ವೇಷರಹಿತ ಸಮಾಜ ನಿರ್ಮಾಣ ಮಾಡಬಹುದು ಎಂದು ಕವಿ ಸ್ವಾರಸ್ಯಪೂರ್ಣವಾಗಿ ತಮ್ಮ ಭಾವನೆಯನ್ನು ಅಭಿವ್ಯಕ್ತಪಡಿಸಿದ್ದಾರೆ.
೨. ‚ಮುಂಗಾರಿನ ಮಳೆಯಾಗೋಣ‛
ಆಯ್ಕೆ: ಈ ವಾಕ್ಯವನ್ನು ಕವಿ ಶ್ರೀ ಜಿ.ಎಸ್.ಶಿವರುದ್ರಪ್ಪ ಅವರು ರಚಿಸಿರುವ `ಎದೆತುಂಬಿ ಹಾಡಿದೆನು' ಕವನ ಸಂಕಲನದಿಂದ ಆಯ್ದ‘ಸಂಕಲ್ಪ ಗೀತೆ’ ಎಂಬ ಕವಿತೆಯಿಂದ ಆರಿಸಲಾಗಿದೆ.
ಸಂದರ್ಭ: ಕವಿ ಜಿ.ಎಸ್.ಶಿವರುದ್ರಪ್ಪನವರು ಪರಿಸರ ಮಾಲಿನ್ಯದ ಬಗ್ಗೆ ತಮ್ಮ ಕಾಳಜಿ ವ್ಯಕ್ತಪಡಿಸುತ್ತಾ ‘ನದೀಜಲಗಳು ಕಲುಷಿತವಾಗಿವೆ, ಕಾಡುಮೇಡುಗಳೆಲ್ಲಾ ಬರಡಾಗಿವೆ. ಆದ್ದರಿಂದ ನಾವು ಮುಂಗಾರು ಮಳೆಯಾಗಿ ಜಲಮಾಲಿನ್ಯವನ್ನು ಹೋಗಲಾಡಿಸಬೇಕು’ ಎಂದು ಹೇಳುವ ಸಂದರ್ಭದಲ್ಲಿ ಈ ಮಾತನ್ನು ಹೇಳುತ್ತಾರೆ.
ಸ್ವಾರಸ್ಯ: ಕವಿಯ ಪರಿಸರ ಪ್ರಜ್ಞೆ ಮತ್ತು ಕಾಳಜಿ ಇಲ್ಲಿ ಸ್ವಾರಸ್ಯಪೂರ್ಣವಾಗಿ ವ್ಯಕ್ತವಾಗಿದೆ.
೩. ‚ಹೊಸ ಭರವಸೆಗಳ ಕಟ್ಟೋಣ‛
ಆಯ್ಕೆ: ಈ ವಾಕ್ಯವನ್ನು ಕವಿ ಶ್ರೀ ಜಿ.ಎಸ್.ಶಿವರುದ್ರಪ್ಪ ಅವರು ರಚಿಸಿರುವ `ಎದೆತುಂಬಿ ಹಾಡಿದೆನು' ಕವನ ಸಂಕಲನದಿಂದ ಆಯ್ದ‘ಸಂಕಲ್ಪ ಗೀತೆ’ ಎಂಬ ಕವಿತೆಯಿಂದ ಆರಿಸಲಾಗಿದೆ.
ಸಂದರ್ಭ: ಕವಿ ಜಿ.ಎಸ್.ಶಿವರುದ್ರಪ್ಪನವರು ಸಾಮಾಜಿಕ ಕಳಕಳಿಯನ್ನು ವ್ಯಕ್ತಪಡಿಸುತ್ತಾ ಸಮಾಜದಲ್ಲಿ ಕಷ್ಟದಲ್ಲಿ ಬುದಕುತ್ತಾ ಜೀವನದಲ್ಲಿ ಕೆಳಗೆ ಬಿದ್ದವರನ್ನು ಅಂದರೆ ನಿರಾಶಾಭಾವನೆಯಿಂದ ಕುಂದಿಹೋದ ಜನರನ್ನು ಭರವಸೆಯ ಮೂಡಿಸಿ ಮೇಲೆಬ್ಬಿಸಿ ನಿಲ್ಲಿಸಬೇಕು ಎಂದು ಹೇಳುವ ಸಂದರ್ಭದಲ್ಲಿ ಈ ಮಾತನ್ನು ಹೇಳುತ್ತಾರೆ.
ಸ್ವಾರಸ್ಯ: ನಾವು ಹೊಸ ಭರವಸೆಯನ್ನು ಮೂಡಿಸುವ ಸಂಕಲ್ಪ ಕೈಗೊಳ್ಳುವುದರಿಂದ ಸಮಾಜದ ನೈತಿಕ ಅಧಃಪತನವನ್ನು ತಡೆಯಬಹುದು ಎಂಬ ಅಮೂಲ್ಯವಾದ ಭಾವನೆ ಸ್ವಾರಸ್ಯಪೂರ್ಣವಾಗಿ ವ್ಯಕ್ತವಾಗಿದೆ.
೪. ‚ಹೊಸ ಎಚ್ಚರದೊಳು ಬದುಕೋಣ‛
ಆಯ್ಕೆ: ಈ ವಾಕ್ಯವನ್ನು ಕವಿ ಶ್ರೀ ಜಿ.ಎಸ್.ಶಿವರುದ್ರಪ್ಪ ಅವರು ರಚಿಸಿರುವ `ಎದೆತುಂಬಿ ಹಾಡಿದೆನು' ಕವನ ಸಂಕಲನದಿಂದ ಆಯ್ದ‘ಸಂಕಲ್ಪ ಗೀತೆ’ ಎಂಬ ಕವಿತೆಯಿಂದ ಆರಿಸಲಾಗಿದೆ.
ಸಂದರ್ಭ :- ಕವಿ ಜಿ.ಎಸ್.ಶಿವರುದ್ರಪ್ಪನವರು ಮತ-ಧರ್ಮಗಳು ನಮ್ಮ ಜೀವನ ಮಾರ್ಗಗಳು ಎಂದು ಹೇಳುತ್ತಾ ಭೇದಭಾವ ಮರೆತು ಆಯಾ ಧರ್ಮದಲ್ಲಿರುವ ಒಳಿತುಗಳನ್ನು ಎಚ್ಚರಿಕೆಯಿಂದ ಗುರುತಿಸಿ ಅಳವಡಿಸಿಕೊಳ್ಳಬೇಕು ಎಂದು ಹೇಳುವ ಸಂದರ್ಭದಲ್ಲಿ ಈ ಮಾತನ್ನು ಹೇಳುತ್ತಾರೆ.
ಸ್ವಾರಸ್ಯ :- ‚ಎಲ್ಲ ಮತಗಳು ಸಾಧನೆಯ ದಾರಿಗಳು ಎಂಬ ಎಚ್ಚರದಲ್ಲಿ ಬದುಕುವ ಸಂಕಲ್ಪ ಕೈಗೊಳ್ಳುವುದರಿಂದ ದೇಶದಲ್ಲಿ ಶಾಂತಿಯು ನೆಲೆಸುವಂತೆ ಮಾಡಬಹುದು‛ ಎಂಬುದು ಧಾರ್ಮಿಕ ಸಹಿಷ್ಣು ತೆಯ ದೃಷ್ಟಿಯಿಂದ ಮಹತ್ವಪೂರ್ಣವಾದ ಅಂಶವಾಗಿದೆ.
೫. ‚ಮನುಜರ ನಡುವಣ ಅಡ್ಡಗೋಡೆಗಳ ಕೆಡವುತ ಸೇತುವೆಯಾಗೋಣ''
ಆಯ್ಕೆ: ಈ ವಾಕ್ಯವನ್ನು ಕವಿ ಶ್ರೀ ಜಿ.ಎಸ್.ಶಿವರುದ್ರಪ್ಪ ಅವರು ರಚಿಸಿರುವ `ಎದೆತುಂಬಿ ಹಾಡಿದೆನು' ಕವನ ಸಂಕಲನದಿಂದ ಆಯ್ದ‘ಸಂಕಲ್ಪ ಗೀತೆ’ ಎಂಬ ಕವಿತೆಯಿಂದ ಆರಿಸಲಾಗಿದೆ.
ಸಂದರ್ಭ: ``ನಾವು ಮನುಜರ ನಡುವೆ ಇರುವ ಜಾತಿ, ಧರ್ಮ ಮತಗಳೆಂಬ ಅಡ್ಡಗೋಡೆಗಳನ್ನು ಕೆಡವಿ ಪಂಪನ ‘ಮನುಷ್ಯ ಜಾತಿ ತಾನೊಂದೆ ವಲಂʼ ಎಂಬ ಸಮಾನತೆಯ ಭಾವನೆಯಿಂದ ಮನುಜರನ್ನು ಬೆಸೆಯುವ ಸೇತುವೆಯಾಗುವ ದೃಢಸಂಕಲ್ಪವನ್ನು ಕೈಗೊಳ್ಳಬೇಕು'' ಎಂದು ಹೇಳುವ ಸಂದರ್ಭದಲ್ಲಿ ಈ ಮಾತನ್ನು ಹೇಳುತ್ತಾರೆ.
ಸ್ವಾರಸ್ಯ: ಕವಿಗಳು ``ಜೀವನದಲ್ಲಿ ಧನಾತ್ಮಕ ಮನೋಭಾವನೆಯ ದೃಢಸಂಕಲ್ಪವನ್ನು ಹೊಂದಿರಬೇಕು'' ಎನ್ನುವುದನ್ನು ಕವಿ ಈ ಮಾತುಗಳಲ್ಲಿ ಬಹು ಸ್ವಾರಸ್ಯಪೂರ್ಣವಾಗಿ ಅಭಿವ್ಯಕ್ತಪಡಿಸುತ್ತಾರೆ.