ಅವ್ಯಯಗಳು
‘ನಾಮಪದ, ಕ್ರಿಯಾಪದಗಳಂತೆ ಲಿಂಗ, ವಚನ, ವಿಭಕ್ತಿಗಳಿಂದ ರೂಪಭೇದವನ್ನು ಹೊಂದದೆ ಏಕರೂಪವಾಗಿರುವ ಪದಗಳನ್ನು ಅವ್ಯಯ’ ಎಂದು ಕರೆಯಲಾಗಿದೆ.
ಈ ಅವ್ಯಯಗಳನ್ನು
1.ಸಾಮಾನ್ಯಾವ್ಯಯ,
2.ಅನುಕರಣಾವ್ಯಯ,
3.ಭಾವಸೂಚಕಾವ್ಯಯ,
4..ಕ್ರಿಯಾರ್ಥಕಾವ್ಯಯ,
5.ಸಂಬಂಧಾರ್ಥಕಾವ್ಯಯ,
6.ಕೃದಂತಾವ್ಯಯ,
7.ತದ್ಧಿತಾಂತಾವ್ಯಯ,
8.ಅವಧಾರಣಾರ್ಥಕಾವ್ಯಯ ಇತ್ಯಾದಿ ಗುಂಪುಗಳಾಗಿ ವಿಂಗಡಿಸಬಹುದು
1. ಸಾಮಾನ್ಯಾರ್ಥಕಾವ್ಯಯ : ಯಾವುದಾದರೊಂದು ಕ್ರಿಯೆ ನಡೆದ ರೀತಿಯನ್ನು ಹೇಳುವಂತಹ ಅವ್ಯಯಗಳೇ ಸಾಮಾನ್ಯಾವ್ಯಯಗಳು. ಇವು ಹೆಚ್ಚಾಗಿ ವಿಶೇಷಣಗಳಾಗಿರುತ್ತವೆ.
ಉದಾ:- ಬೇಗನೆ, ಮೆಲ್ಲಗೆ, ಸೊಗಸಾಗಿ, ಸುಮ್ಮನೆ, ತಟ್ಟನೆ, ತರುವಾಯ, ಹಾಗೆ, ಅಂತು, ಬೇರೆ, ಬಳಿಕ, ಕೂಡಲೆ, ಚೆನ್ನಾಗಿ ಇತ್ಯಾದಿಗಳು.
2.ಅನುಕರಣಾವ್ಯಯಗಳು : ನಿರ್ದಿಷ್ಟ ಅರ್ಥವಿಲ್ಲದ ಧ್ವನಿ ವಿಶೇಷಣಗಳನ್ನು ತಾನು ಕಿವಿಯಿಂದ ಕೇಳಿದಂತೆ ಅನುಕರಣೆ ಮಾಡಿ ಹೇಳುವ ಪದಗಳನ್ನು ‘ಅನುಕರಣಾವ್ಯಯಗಳೆಂದು’ ಕರೆಯುತ್ತಾರೆ.
ಉದಾ: ಚಟಚಟ, ಕರಕರ, ಚುರುಚುರು, ಧಗಧಗ, ರೊಯ್ಯನೆ, ಸುಯ್ಯನೆ, ಘುಳುಘುಳು, ದಡದಡ ಇತ್ಯಾದಿ ಪದಗಳು.
3.ಭಾವಸೂಚಕಾವ್ಯಯಗಳು:- ಮನಸ್ಸಿನಲ್ಲಿ ಉಂಟಾಗುವ ಕೋಪ, ಹರ್ಷ, ದುಃಖ, ಮೆಚ್ಚುಗೆ, ಆಕ್ಷೇಪ, ತಿರಸ್ಕಾರ -ಇತ್ಯಾದಿ ಭಾವಗಳನ್ನು ವ್ಯಕ್ತಪಡಿಸುವಾಗ ಅರ್ಥವಿಲ್ಲದ ಕೆಲವು ಪದಗಳನ್ನು ಬಳಸುತ್ತೇವೆ. ಅಂತಹ ಪದಗಳನ್ನು ಭಾವಸೂಚಕ ಅವ್ಯಯಗಳೆಂದು ಕರೆಯುತ್ತಾರೆ.
ಉದಾ:- ಆಹಾ! ಭಳಿರೆ! ಅಯ್ಯೋ! ಓಹೋ! ಹೋ! , ಅಃ! ಆಃ, ಓ - ಇತ್ಯಾದಿ ಪದಗಳು, ಅಥವಾ ಪದರೂಪದ ಅಕ್ಷರಗಳು.
4.ಕ್ರಿಯಾರ್ಥಕಾವ್ಯಯಗಳು: ಕ್ರಿಯಾಪದದ ಸ್ಥಾನದಲ್ಲಿದ್ದು ವಾಕ್ಯದ ಅರ್ಥವನ್ನು ಪೂರ್ಣಗೊಳಿಸುವ ಅವ್ಯಯಗಳನ್ನು ಕ್ರಿಯಾರ್ಥಕ ಅವ್ಯಯಗಳು ಎಂದು ಕರೆಯಲಾಗಿದೆ.
ಉದಾ:- ಅಹುದು, ಸಾಕು, ಅಲ್ಲ, ಹೌದು, ಬೇಡ, ಉಂಟು-ಇತ್ಯಾದಿ.
5. ಸಂಬಂಧಾರ್ಥಕಾವ್ಯಯಗಳು: ಎರಡು ಪದಗಳನ್ನಾಗಲೀ ಹಲವು ಪದ ಸಮುಚ್ಚಯಗಳನ್ನಾಗಲೀ, ವಾಕ್ಯಗಳನ್ನಾಗಲೀ, ಜೋಡಿಸುವಂತಹ ಅಥವಾ ಸಂಬAಧಗೊಳಿಸುವAತಹ ಪದಗಳೇ ಸಂಬAಧಾರ್ಥಕ ಅವ್ಯಯಗಳು.
ಉದಾ:- ಮತ್ತು, ಅಥವಾ, ಆದ್ದರಿಂದ, ಊ, ಉಂ, ಅಲ್ಲದೆ ಇತ್ಯಾದಿ.
ಪದಗಳ ಜೋಡಣೆ :- ರಾಮನೂ ಲಕ್ಷö್ಮಣನೂ ಸೀತೆಯೂ ಕಾಡಿಗೆ ಹೊರಟರು.
ಪದಸಮುಚ್ಚಯ ಜೋಡಣೆ:- ಅವನು ಬರುವುದೂ ಬೇಡ; ಆ ಕೆಲಸ ಆಗುವುದೂ ಬೇಡ.
ವಾಕ್ಯಗಳ ಜೋಡಣೆ:- ಅವನು ಬರಲಿಲ್ಲ ಆದ್ದರಿಂದ ನಾನೂ ಬರಲಿಲ್ಲ.
6.ಅವಧರಣಾರ್ಥಕಾವ್ಯಯ :- ಒಂದುನಿಶ್ಚಯಾರ್ಥದಲ್ಲಿರುವ ಅವ್ಯಯವನ್ನು ಅವಧಾರಣಾರ್ಥಕ ಅವ್ಯಯಎಂದು ಕರೆಯುತ್ತಾರೆ .ಹಲವು ವಸ್ತುಗಳಲ್ಲಿ ಒಂದನ್ನು ನಿಶ್ಚಯವಾಗಿ ಹೇಳುವ ಸಂದರ್ಭಧಲ್ಲಿ ಈ ಅವ್ಯಯವನ್ನು ಬಳಸಲಾಗುತ್ತದೆ.
ಉದಾ:- ಅವನೇ, ಅದುವೇ, ನೀನೇ, ಅವಳೇ, ಅವರೇ, ಇತ್ಯಾದಿ ಪದಗಳ ಕೊನೆಯಲ್ಲಿರುವ ‘ಏ’ ಎಂಬ ಅಕ್ಷರವೇ ಅವಧಾರಣಾರ್ಥಕ ಅವ್ಯಯ.
ಕೃದಂತಾವ್ಯಯ ಮತ್ತು ತದ್ಧಿತಾಂತಾವ್ಯಯಗಳ ವಿವರವನ್ನು ಕೃದಂತ ಮತ್ತು ತದ್ಧಿತ ಪ್ರಕರಣಗಳ ವಿವರಣೆಯ ಸಂದರ್ಭದಲ್ಲಿ ತಿಳಿಯೋಣ.