ಕನ್ನಡ ಸೌರಭ 10ನೆಯ ತರಗತಿ ಪದ್ಯಗಳ ಸಾರಾಂಶ
ಪದ್ಯಪಾಠ –3 ಕೌರವೇಂದ್ರನ ಕೊಂದೆ ನೀನು
ಇನತನೂಜನ ಕೂಡೆ ಮೈದುನ
ತನದ ಸರಸವನೆಸಗಿ ರಥದೊಳು
ದನುಜರಿಪು ಬರಸೆಳೆದು ಕುಳ್ಳಿರಿಸಿದನು ಪೀಠದಲಿ
ಎನಗೆ ನಿಮ್ಮಡಿಗಳಲಿ ಸಮಸೇ
ವನೆಯೆ ದೇವ ಮುರಾರಿಯಂಜುವೆ
ನೆನಲು ತೊಡೆಸೋಂಕಿನಲಿ ಸಾರಿದು ಶೌರಿಯಿಂತೆಂದ || ೧ ||
ಸೂರ್ಯಪುತ್ರನಾದ ಕರ್ಣನನ್ನು ಮೈದುನತನದ ಸಲುಗೆಯಿಂದ ರಾಕ್ಷಸ ಸಂಹಾರಕನಾದ (ದನುಜ ರಿಪು) ಕೃಷ್ಣನು ಬರಸೆಳೆದು ತನ್ನ ರಥದ ಪೀಠದಲ್ಲಿ ಕುಳ್ಳಿರಿಸಿದನು. ಆಗ ಅದನ್ನು ನಿರೀಕ್ಷಿಸದ ಕರ್ಣನು ''ದೇವಾ ನಾನು ನಿಮ್ಮ ಪಾದದ ದೇವ ನಿಮ್ಮ ಪಾದದ ಕೆಳಗೆ ಕೂರುವವನು ಇಂತವನಿಗೆ ಸಮಗೌರವವೇ ,ನಿಮ್ಮೊಡನೆ ನಾನು ಸರಿಸಮಾನನಾಗಿ ಕುಳಿತುಕೊಳ್ಳಬಹುದೇ? ದೇವ ಮುರಾರಿ, ನನಗೇಕೋ ಭಯವಾಗುತ್ತಿದೆ'' ಎಂದು ಹೇಳಲು, ಶ್ರೀಕೃಷ್ಣನು(ಶೌರಿ) ಅವನ ಪಕ್ಕಕ್ಕೆ ತೊಡೆಗೆ ತೊಡೆ ಸೋಕುವಂತೆ ಕುಳಿತುಕೊಂಡು ಹೀಗೆಂದನು.
ಭೇದವಿಲ್ಲೆಲೆ ಕರ್ಣ ನಿಮ್ಮೊಳು
ಯಾದವರು ಕೌರವರೊಳಗೆ ಸಂ
ವಾದಿಸುವಡನ್ವಯಕೆ ಮೊದಲೆರಡಿಲ್ಲ ನಿನ್ನಾಣೆ
ಮೇದಿನೀಪತಿ ನೀನು ಚಿತ್ತದೊ
ಳಾದುದರಿವಿಲ್ಲೆನುತ ದಾನವ
ಸೂದನನು ರವಿಸುತನ ಕಿವಿಯಲಿ ಬಿತ್ತಿದನು ಭಯವ || ೨ ||
“ಎಲೈ ಕರ್ಣ,ಪಾಂಡವರು , ಕೌರವರು ಮತ್ತು ಯಾದವ ವಂಶಗಳ ನಡುವೆ ಭೇದವಿಲ್ಲ. ವಿಚಾರ ಮಾಡಿ ನೋಡಿದರೆ ಇಬ್ಬರೂ ಒಂದೇ ವಂಶದವರು ನಿನ್ನಾಣೆಯಾಗಿಯೂ ನೀನು ಈ ಭೂಮಿಯ (ರಾಜ್ಯದ)ಒಡೆಯ ʼ ಆದರೆ ನಿನ್ನ ಮನಸ್ಸಿನಲ್ಲಿ ಇದರ ಅರಿವು ಯಾವುದು ಇಲ್ಲ.”ಎಂದು ಹೇಳುವ ಮೂಲಕ ದಾನವರ ವೈರಿಯಾದ ಶ್ರೀಕೃಷ್ಣನು ರವಿಸುತ (ಕರ್ಣ)ನ ಕಿವಿಯಲ್ಲಿ ಭಯವನ್ನು ಬಿತ್ತಿದನು.
ಲಲನೆ ಪಡೆದೀಯೈದು ಮಂತ್ರಂ
ಗಳಲಿ ಮೊದಲಿಗ ನೀನು ನಿನ್ನಯ
ಬಳಿ ಯುಧಿಷ್ಠಿರದೇವ ಮೂರನೆಯಾತ ಕಲಿಭೀಮ
ಫಲುಗುಣನು ನಾಲ್ಕನೆಯಲೈದನೆ
ಯಲಿ ನಕುಲ ಸಹದೇವರಾದರು
ಬಳಿಕ ಮಾದ್ರಿಯಲೊಂದು ಮಂತ್ರದೊಳಿಬ್ಬರುದಿಸಿದರು || ೩ |
ಪಾಂಡವರ ತಾಯಿಯಾದ ಕುಂತಿಯು ದೂರ್ವಾಸ ಮುನಿಗಳಿಂದ ಪಡೆದ ಐದು ಮಂತ್ರಗಳಲ್ಲಿ ನೀನು ಮೊದಲನೆಯವನು, ನಿನ್ನ ನಂತರದಲ್ಲಿ ಎರಡನೆಯ ವರದಲ್ಲಿ ಯುಧಿಷ್ಠಿರ(ಧರ್ಮರಾಯ), ಜನಿಸಿದನು ಮೂರನೆಯವನು ಶೂರನಾದ ಭೀಮನು, ಅರ್ಜುನನು, ನಾಲ್ಕನೆಯವನು ಆನಂತರದಲ್ಲಿ ಮಾದ್ರಿಯಲ್ಲಿ ಒಂದು ಮಂತ್ರದಿಂದ ನಕುಲ ಸಹದೇವರು ಜನಿಸಿದರು ಎಂದು ಶ್ರೀ ಕೃಷ್ಣನು ಕರ್ಣನಿಗೆ ಅವನ ಜನ್ಮ ವೃತ್ತಾಂತವನ್ನು ಹೇಳಿದನು .
ನಿನಗೆ ಹಸ್ತಿನಪುರದ ರಾಜ್ಯದ
ಘನತೆಯನು ಮಾಡುವೆನು ಪಾಂಡವ
ಜನಪ ಕೌರವ ಜನಪರೋಲೈಸುವರು ಗದ್ದುಗೆಯ
ನಿನಗೆ ಕಿಂಕರವೆರಡು ಸಂತತಿ
ಯೆನಿಸಲೊಲ್ಲದೆ ನೀನು ದುರಿಯೋ
ಧನನ ಬಾಯ್ದಂಬುಲಕೆ ಕೈಯಾನುವರೆ ಹೇಳೆಂದ || ೪ ||
ಕೃಷ್ಣನು “ ಎಲೈ ಕರ್ಣನೆ ನಿನ್ನನ್ನು ಹಸ್ತಿನಾಪುರದ ರಾಜನನ್ನಾಗಿ ಮಾಡುವೆನು. ಪಾಂಡವ ರಾಜರು ,ಕೌರವ ರಾಜರು ನಿನ್ನ ಪೀಠವನ್ನು ಒಪ್ಪುತ್ತಾರೆ. ನಿನಗೆ ಈ ಎರಡು ವಂಶಗಳು ಸೇವಕರಾಗಿ ಸೇವೆ ಮಾಡುತ್ತಾರೆ. ಇದನ್ನು ಬಿಟ್ಟು ನೀನು ದುರ್ಯೋಧನನ ಬಾಯೆಂಜಲಿಗೆ ಕೈಚಾಚುವುದು ಸರಿಯೇ’’ ಎಂದು ಪ್ರಶ್ನಿಸಿದನು.
ಎಡದ ಮೈಯಲಿ ಕೌರವೇಂದ್ರರ
ಗಡಣ ಬಲದಲಿ ಪಾಂಡು ತನಯರ
ಗಡಣವಿದಿರಲಿ ಮಾದ್ರ ಮಾಗಧ ಯಾದವಾದಿಗಳು
ನಡುವೆ ನೀನೋಲಗದೊಳೊಪ್ಪುವ
ಕಡು ವಿಲಾಸವ ಬಿಸುಟು ಕುರುಪತಿ
ನುಡಿಸೆ ಜೀಯ ಹಸಾದವೆಂಬುದು ಕಷ್ಟ ನಿನಗೆಂದ || ೫ ||
ಮುಂದುವರಿದು ಕೃಷ್ಣ “ನಿನ್ನ ಎಡ ಭಾಗದಲ್ಲಿ ಕೌರವನ ಸಮೂಹದವರು, ಬಲ ಭಾಗದಲ್ಲಿ ಪಾಂಡವರ ಸಮೂಹ , ಎದುರುಗಡೆ ಮಾದ್ರಿ, ಮಾಗಧ, ಯಾದವಾದಿಗಳು ಇವರೆಲ್ಲರ ನಡುವೆ ನೀನು ಓಲಗದಲ್ಲಿ ಶೋಭಿಸುವ ಮಹಾಸೌಭಾಗ್ಯವನ್ನು ಬಿಟ್ಟು ದುರ್ಯೋಧನ ಹೇಳಿದ ಮಾತಿಗೆ ಒಡೆಯ ಪ್ರಸಾದ(ಅನುಗ್ರಹ)ವಾಯಿತು ಎಂದು ಹೇಳುವುದು ನಿನಗೆ ಕಷ್ಟವಲ್ಲವೆ” ಎಂದು ಹೇಳಿದನು
ಕೊರಳ ಸೆರೆ ಹಿಗ್ಗಿದವು ದೃಗುಜಲ
ಉರವಣ ಸಿ ಕಡು ನೊಂದನಕಟಾ
ಕುರುಪತಿಗೆ ಕೇಡಾದುದೆಂದನು ತನ್ನ ಮನದೊಳಗೆ
ಹರಿಯ ಹಗೆ ಹೊಗೆದೋರದುರುಹದೆ
ಬರಿದೆ ಹೋಹುದೆ ತನ್ನ ವಂಶವ
ನರುಹಿ ಕೊಂದನು ಹಲವು ಮಾತೇನೆಂದು ಚಿಂತಿಸಿದ || ೬ ||
ಕೃಷ್ಣನ ಮಾತನ್ನು ಕೇಳಿದ ಕರ್ಣನ ಕೊರಳ ನರಗಳು ಬಿಗಿದವು, ಕಣ್ಣೀರು ಹೆಚ್ಚಾಗಿ ಅತಿಯಾಗಿ ನೊಂದುಕೊಂಡನು. ಮನಸ್ಸಿನಲ್ಲಿ ಅಯ್ಯೋ ಕುರುಪತಿಗೆ ಕೇಡಾಯಿತಲ್ಲಾಎಂದುಕೊಂಡನು. ,ಕೃಷ್ಣನ ವೈರತ್ವದ ಬೆಂಕಿ ಹೊರಗೆ ಹೊಗೆ ತೋರದೆ ಸುಡದೆ ಇರಲಾರದು ( ತನ್ನ ದ್ವೇಷವನ್ನು ಹೊರಗೆ ತೋರಿಸದೆ ತೀರಿಸಿಕೊಳ್ಳುವನಲ್ಲ ) ತನ್ನ ವಂಶವನ್ನು ತಿಳಿಸಿ ನನ್ನನ್ನು ಕೊಂದು ಹಾಕಿದನು ಮುಂದೇನು ಮಾತಾನಾಡುವುದು ಎಂದು ಚಿಂತಾಕ್ರಾಂತನಾದನು.
ಏನು ಹೇಳೈ ಕರ್ಣ ಚಿತ್ತ
ಗ್ಲಾನಿ ಯಾವುದು ಮನಕೆ ಕುಂತೀ
ಸೂನುಗಳ ಬೆಸಕೈಸಿಕೊಂಬುದು ಸೇರದೇ ನಿನಗೆ
ಹಾನಿಯಿಲ್ಲೆನ್ನಾಣೆ ನುಡಿ ನುಡಿ
ಮೌನವೇತಕೆ ಮರುಳುತನ ಬೇ
ಡಾನು ನಿನ್ನಪದೆಸೆಯ ಬಯಸುವನಲ್ಲ ಕೇಳೆಂದ || ೭ ||
ಕರ್ಣನು
ಮನಸ್ಸಿನಲ್ಲಿ ಚಿಂತಿಸುತ್ತಿರುವುದನ್ನು ನೋಡಿ ಕೃಷ್ಣ
ಹೀಗೆಂದನು ಏನು ಹೇಳು
ಕರ್ಣ? ನಿನ್ನ ಮನದಲ್ಲಿರುವ ತಲ್ಲಣ ಯಾವುದು ?ಕುಂತಿಪುತ್ರರಿಂದ
ಸೇವೆ ಮಾಡಿಸಿಕೊಳ್ಳುವುದು ನಿನಗೆ ಇಷ್ಟವಾಗುವುದಿಲ್ಲವೇ? ನನ್ನಾಣೆಗೂ ನಿನಗೆ ಯಾವುದೇ ನಷ್ಟವಿಲ್ಲ,
ಮಾತನಾಡು. ಮೌನವೇಕೆ? ಈ ದಡ್ಡತನ ಬೇಡ,
ನಾನು ನಿನಗೆ ಕೇಡನ್ನು ಬಯಸುವುದಿಲ್ಲ”
ಕೇಳು.ಎಂದು ಕೃಷ್ಣನು ಕರ್ಣನಿಗೆ
ಸಾಂತ್ವನ ಹೇಳುತ್ತಾನೆ.
ಆಗ ಕರ್ಣನು “ಅಯ್ಯೋ ಮರುಳು ಕೃಷ್ಣನೇ ನಾನು ಈ ರಾಜ್ಯದ
ಭೂಮಿಯ ಸಿರಿಗೆ(ಐಶ್ವರ್ಯಕ್ಕೆ) ಸೋಲುವವನಲ್ಲ, ಕುಂತಿಯ ಪುತ್ರರು , ದುರ್ಯೋಧನರಿಂದ ಸೇವೆ ಮಾಡಿಸಿಕೊಳ್ಳವುದರಲ್ಲಿಎನಗೆ ಮನಸ್ಸಿಲ್ಲ. ನನ್ನನ್ನು
ಸಲಹಿದ ನನ್ನ ಒಡೆಯನಿಗೆ (ದಾತಾರ-ದಾತೃ) ‘ಶತ್ರುಗಳ ತಲೆಯನ್ನು ಕಡಿದು ಒಪ್ಪಿಸುವೆನು’ ಎನ್ನುವ ಆತುರದಲ್ಲಿದ್ದೆನು ಆದರೆ ಕೌರವೇಂದ್ರನನ್ನು (ದುರ್ಯೋಧನನ)ಕೊಂದೆ ನೀನು” ಎಂದು ಕರ್ಣನು ನೋವಿನಿಂದ
ಶ್ರೀಕೃಷ್ಣನಿಗೆ ಹೇಳಿದನು
ಮುಂದುವರಿದು,
ಕರ್ಣನು “ವೀರ ಕೌರವರಾಯನೇ(ದುರ್ಯೋಧನ) ನನಗೆ ಒಡೆಯ,ಆತನ ವೈರಿಗಳು ನನಗೂ ವೈರಿಗಳೇ, ಆತನ ಹೊಗಳಿಯೇ
ನನ್ನ ಹೊಗಳಿಕೆ. ದುರ್ಯೋಧನ ಆದಂತೆ ಆಗುವೆನು ಆತನಿಗೆ ಆದದ್ದು ನನಗೂ ಆಗಲಿ ಕೃಷ್ಣನೇ ಕೇಳು
ನಾಳಿನ ಸಮರದಲ್ಲಿ , ಪಾಂಡುವಿನ ಪುತ್ರರಲ್ಲಿ ನನ್ನ ಭುಜಭಲದ ಪರಾಕ್ರಮವನ್ನು , ಅದರ(ಶೌರ್ಯದ) ಶ್ರೇಷ್ಠತೆಯನ್ನು
ತೋರಿಸುತ್ತೇನೆ. ಎಂದು ಕರ್ಣನು ಹೇಳಿದನು.
ಮುಂದುವರಿದು
ಕರ್ಣನು ನಾಳೆ ಬರಲಿರುವ ಭಾರತ(ಮಹಾಭಾರತ)ಯುದ್ಧವು ಮೃತ್ಯುದೇವತೆಗೆ ಭೋಜನ ಕೂಟವಾಗುತ್ತದೆ. ಯುದ್ಧರಂಗದಲ್ಲಿ
ಅಸಂಖ್ಯ ವೀರಯೋಧರನ್ನು ಕೊಂದು ನನ್ನ ಒಡೆಯನಾದ ಕೌರವನ ಋಣ ತೀರುವಂತೆ ಮಾಡುತ್ತೇನೆ. ಒಡೆಯನ
ಅಗತ್ಯದ ಸಮಯಕ್ಕೆ ಆಗುವಂತೆ ನನ್ನ ಶರೀರವನ್ನು ತ್ಯಜಿಸುತ್ತೇನೆ. ನಿನ್ನ ಧೀರರಾದ ಪಾಂಡವರನ್ನು ಸೂರ್ಯನಾಣೆಯಾಗಿಯೂ
ಯಾವುದೇ ಕಾರಣಕ್ಕೂ ನೋಯಿಸುವುದಿಲ್ಲ ಎಂದು ಕರ್ಣನು ಶ್ರೀಕೃಷ್ಣನಿಗೆ ಹೇಳಿದನು.