ನಾಮವಾಚಕಗಳು
ನಾಮವಾಚಕಗಳು - ವ್ಯಾಕರಣ ನೋಟ್ಸ್ ( Kannada grammer notes )
ನಾಮವಾಚಕಗಳು : ನಾಮಪದದ ಮೂಲರೂಪವಾಗಿಯೂ, ಕ್ರಿಯೆಯ ಅರ್ಥವನ್ನು ಕೊಡದೆಯೂ ಇರುವ ಶಬ್ದವೇ ನಾಮಪ್ರಕೃತಿಯೆನಿಸುವುದು.ನಾಮವಾಚಕ ಪ್ರಕೃತಿಗಳನ್ನು
೧ ವಸ್ತುವಾಚಕ, ೨ ಗುಣವಾಚಕ,
೩ ಸಂಖ್ಯಾವಾಚಕ, ೪ ಸಂಖ್ಯೇಯವಾಚಕ,
೫ ಭಾವನಾಮ, ೬ ಪರಿಮಾಣ ವಾಚಕ,
೭ ದಿಗ್ವಾಚಕ, ೮ ಸರ್ವನಾಮ
ಎಂಬುದಾಗಿ ಅನೇಕ ಗುಂಪುಗಳಾಗಿ ವಿಂಗಡಿಸಬಹುದು.
೧ ವಸ್ತುವಾಚಕ : ವಸ್ತುಗಳ ಹೆಸರನ್ನು ಹೇಳುವ ಪದಗಳೇ ವಸ್ತುವಾಚಕಗಳು. ವಸ್ತುಗಳನ್ನು ಚೇತನ (ಚೇತನವುಳ್ಳ), ಅಚೇತನ (ಚೇತನವಿಲ್ಲದ್ದು) ಎಂದು ವಿಭಾಗಿಸಲಾಗಿದೆ.
ಉದಾ : ಮನುಷ್ಯ, ಪ್ರಾಣ , ಪಕ್ಷಿ ಇವು ಚೇತನವುಳ್ಳವು.
ನೆಲ, ಜಲ, ಹಣ್ಣು, ಕಾಯಿ, ಮನೆ, ಬೆಟ್ಟ ಇವು ಚೇತನವಿಲ್ಲದವು.
ಇಂತಹ ವಸ್ತುವಾಚಕಗಳನ್ನು ರೂಢನಾಮ, ಅಂಕಿತನಾಮ, ಅನ್ವರ್ಥನಾಮಗಳೆಂದು ಮೂರು ವಿಭಾಗ ಮಾಡಲಾಗಿದೆ.
ರೂಢನಾಮ : ರೂಢಿಯಿಂದ ಬಂದಿರುವ ನದಿ, ಪರ್ವತ, ಮನುಷ್ಯ, ಹೆಂಗಸು, ಮರ, ದೇಶ ಮುಂತಾದ ಪದಗಳು ರೂಢನಾಮಗಳು.
ಅಂಕಿತನಾಮ : ವ್ಯವಹಾರಕ್ಕಾಗಿ ಅಥವಾ ಗುರುತಿಸಲು ಇಟ್ಟ ಹೆಸರುಗಳಾದ ಕಾವೇರಿ, ನಕುಲ, ಹಿಮಾಲಯ, ಶಂಕರ, ಬೆಂಗಳೂರು, ಬೇವು ಮುಂತಾದ ಹೆಸರುಗಳೇ ಅಂಕಿತನಾಮಗಳು.
ಅನ್ವರ್ಥನಾಮ : ಅರ್ಥಕ್ಕೆ ಅನುಗುಣವಾಗಿ ರಚನೆಯಾದ ವ್ಯಾಪಾರಿ, ವಿದ್ವಾಂಸ, ರೋಗಿ ಮುಂತಾದ ಪದಗಳೇ ಅನ್ವರ್ಥನಾಮಗಳು.
೨ ಗುಣವಾಚಕ : ವಸ್ತುಗಳ ಗುಣ, ರೀತಿ, ಸ್ವಭಾವಗಳನ್ನು ಹೇಳುವ ವಿಶೇಷಣಗಳೇ ಗುಣವಾಚಕಗಳು.
ಉದಾ : ಒಳ್ಳೆಯ, ಕೆಟ್ಟ, ಹೊಸದು, ದೊಡ್ಡದು ಇತ್ಯಾದಿ ಪದಗಳು.
೩ ಸಂಖ್ಯಾವಾಚಕ : ಸಂಖ್ಯೆಯನ್ನು ಸೂಚಿಸುವ ಪದಗಳೇ ಸಂಖ್ಯಾವಾಚಕಗಳು.
ಉದಾ : ಒಂದು, ಎರಡು, ಹತ್ತು, ನೂರೈದು, ಸಾವಿರ, ಲಕ್ಷ ಇತ್ಯಾದಿ.
೪ ಸಂಖ್ಯೇಯವಾಚಕ : ಸಂಖ್ಯೆಯಿAದ ಕೂಡಿರುವ ವಸ್ತುಗಳನ್ನು ಹೇಳುವ ಪದಗಳೆಲ್ಲ ಸಂಖ್ಯೇಯ ವಾಚಕಗಳು
`ಮೂವರು ಮಕ್ಕಳು’, `ನಾಲ್ಕನೆಯ ತರಗತಿ’, `ಐವರು ರಾಜಭಟರು’, `ಇಪ್ಪತ್ತೆರಡನೆಯ ತಾರೀಕು’. ಇಲ್ಲಿ `ಮೂವರು’, `ನಾಲ್ಕನೆಯ’, `ಐವರು’, `ಇಪ್ಪತ್ತೆರಡನೆಯ’ ಪದಗಳು ಸಂಖ್ಯೆಯಿAದ ಕೂಡಿರುವ ವಸ್ತುಗಳನ್ನು ಸೂಚಿಸುತ್ತವೆ. (ಎರಡನೆಯ, ನಾಲ್ಕನೆಯ, ಹತ್ತನೆಯ ಇತ್ಯಾದಿ) ಇವುಗಳನ್ನು ಇತ್ತೀಚೆಗೆ ಎರಡನೇ, ನಾಲ್ಕನೇ, ಹತ್ತನೇ ಎಂದೂ ಸಹಾ ಕೆಲವರು ಬಳಸುತ್ತಿದ್ದಾರೆ.
೫.ಭಾವನಾಮ : ವಸ್ತು ಮತ್ತು ಕ್ರಿಯೆಗಳ ಭಾವವನ್ನು ತಿಳಿಸುವ ಪದಗಳೇ ಭಾವನಾಮ.
ಉದಾ : ಕೆಚ್ಚನೆಯದರ ಭಾವ - ಕೆಂಪು
ಬಿಳಿದರ ಭಾವ - ಬಿಳುಪು
ಹಿರಿದರ ಭಾವ - ಹಿರಿಮೆ
ನೋಡುವುದರ ಭಾವ- ನೋಟ
೬ ಪರಿಮಾಣವಾಚಕ : ವಸ್ತುವಿನ ಪರಿಮಾಣ, ಗಾತ್ರವನ್ನು ಹೇಳುವ `ಅಷ್ಟು’, `ಇಷ್ಟು’, `ಹಲವು’, `ಕೆಲವು’, `ಎನಿತು’, `ಅನಿತು’ ಆಸು, ಈಸು, ಏಸು ಮುಂತಾದ ಪದಗಳೇ `ಪರಿಮಾಣವಾಚಕ’ಗಳು.
`ಅಷ್ಟು ದೊಡ್ಡ ಮರವನ್ನು ಹೇಗೆ ಕಡಿದರು?’ `ಇಷ್ಟು ಜನರು ಇಲ್ಲಿ ಸೇರಿ ಏನು ಮಾಡುತ್ತಾರೆ?’ `ತರಗತಿಯಲ್ಲಿ ಎಷ್ಟು ವಿದ್ಯಾರ್ಥಿಗಳಿದ್ದಾರೆ?’ - ಈ ವಾಕ್ಯಗಳಲ್ಲಿ `ಅಷ್ಟು’ `ಇಷ್ಟು’, `ಎಷ್ಟು’ ಎಂಬ ಪದಗಳು ನಿರ್ದಿಷ್ಟ ಅಳತೆ, ಸಂಖ್ಯೆಗಳನ್ನು ಹೇಳುವುದಿಲ್ಲ. ಕೇವಲ ಪರಿಮಾಣ ಅಥವಾ ಗಾತ್ರವನ್ನು ಸೂಚಿಸುತ್ತವೆ.
೭ ದಿಗ್ವಾಚಕ : ದಿಕ್ಕುಗಳನ್ನು ಸೂಚಿಸುವ ಪದಗಳೇ ದಿಗ್ವಾಚಕಗಳು.
ಉದಾ : ಮೂಡಣ, ತೆಂಕಣ, ಪಡುವಣ, ಬಡಗಣ, ಪೂರ್ವ, ಪಶ್ಚಿಮ, ಆಗ್ನೇಯ, ದಕ್ಷಿಣ, ಉತ್ತರ, ಈಶಾನ್ಯ, ಇತ್ಯಾದಿ.
೮ ಸರ್ವನಾಮ : -ನಾಮಪದಗಳ ಸ್ಥಾನದಲ್ಲಿ ಬಂದು ಅವುಗಳ ಕರ್ಯವನ್ನು ನಿರ್ವಹಿಸುವ ಪದಗಳೇ ಸರ್ವನಾಮಗಳು.
ಉದಾ : ಅವನ, ನಾನೂ, ತಾನೂ, ನೀವು ಮುಂತಾದವು
ಈ ಸರ್ವನಾಮಗಳನ್ನು ಪುರುಷಾರ್ಥಕ, ಪ್ರಶ್ನಾರ್ಥಕ ಮತ್ತು ಆತ್ಮಾರ್ಥಕ ಸರ್ವನಾಮಗಳೆಂದು ಮೂರು ವಿಧಗಳಾಗಿ ವಿಂಗಡಿಸಲಾಗಿದೆ.
ಪುರುಷಾರ್ಥಕ ಸರ್ವನಾಮ : ಇದನ್ನು ಮತ್ತೆ ಮೂರು ವಿಭಾಗ ಮಾಡಿದೆ.
- ಉತ್ತಮ ಪುರುಷ : ನಾನು ನಾವು
- ಮಧ್ಯಮ ಪುರುಷ : ನೀನು ನೀವು - ಪ್ರಥಮ ಪುರುಷ/ಅನ್ಯ ಪರುಷ : ಅವನು - ಇವನು ಅವಳು - ಇವಳು ಅವರು - ಇವರು ಅದು - ಅವು ಇದು - ಇವು
(ಇತ್ತೀಚೆಗೆ ಇವುಗಳನ್ನು ಪ್ರಥಮ, ದ್ವಿತೀಯ, ತೃತೀಯ ಪುರುಷಗಳೆಂದು ಹೇಳುವ ವಾಡಿಕೆ ಆರಂಭವಾಗಿದೆ.)
ಪ್ರಶ್ನಾರ್ಥಕ ಸರ್ವನಾಮ : ಯಾರು ಯಾವುದು ಏನು ಯಾವನು ಯಾವಳು
ಆತ್ಮಾರ್ಥಕ ಸರ್ವನಾಮ : ತಾನು ತಾವು ತನ್ನ ತಮ್ಮ