ಬೆಳ್ಳಗಿರುವುದೆಲ್ಲ ಹಾಲಲ್ಲ.
ಗಾದೆಗಳು ವೇದಗಳಿಗೆ ಸಮ. ವೇದಗಳು ಸುಳ್ಳಾದರೂ ಗಾದೆಗಳು ಸುಳ್ಳಾಗದು. ಗಾದೆಗಳು ಹಿರಿಯರ ಅನುಭವದ ನುಡಿಮುತ್ತುಗಳಾಗಿವೆ. ಕನ್ನಡದ ಹಲವಾರು ಗಾದೆಗಳಲ್ಲಿ ಬೆಳ್ಳಗಿರುವುದೆಲ್ಲ ಹಾಲಲ್ಲ ಎಂಬುದು ಒಂದಾಗಿದೆ. ಈ ಗಾದೆ ಅತ್ಯಂತ ಜನಪ್ರಿಯವಾಗಿದೆ.
ಕುರುಡು ನಂಬಿಕೆ ನಾಶದ ನಾಂದಿಯಾಗಿದೆ ಎಂಬುದನ್ನು ಸೂಚಿಸುತ್ತದೆ. ಜೀವನದಲ್ಲಿ ನಂಬಿಕೆ, ವಿಶ್ವಾಸ ಅಗತ್ಯ. ಹಾಲಿನ ಬಣ್ಣ ಬಿಳಿ ನಿಜ. ಆದರೆ ಎಲ್ಲ ಬಿಳಿ ಬಣ್ಣದ ವಸ್ತುಗಳು ಹಾಲಾಗಲಾರವು. ಬಣ್ಣ ಬಿಳಿ ಎಂದು ಸುಣ್ಣದ ನೀರನ್ನು ಕುಡಿಯುವುದು ಅವಿವೇಕತನದ ಲಕ್ಷಣವಾಗುತ್ತದೆ. ಕೇವಲ ಬಣ್ಣದಿಂದ ಮೃದು ನುಡಿಗಳಿಂದ ಒಬ್ಬ ವ್ಯಕ್ತಿಯ ವ್ಯಕ್ತಿತ್ವವನ್ನು ಅಳೆಯಲಾಗುವುದಿಲ್ಲ. ಒಬ್ಬರಂತೆ ಮತ್ತೊಬ್ಬರು ಇರುವುದಿಲ್ಲ. ವ್ಯಕ್ತಿಯ ಗುಣವನ್ನು, ನಡೆತೆಯನ್ನು ಅರಿತುಕೊಂಡು ಕಾರ್ಯ ಪ್ರವೃತ್ತರಾಗಬೇಕು. ಬೆಳ್ಳಗಿದ್ದದೆಲ್ಲ ಹಾಲೆಂದು ಸುಣ್ಣದ ನೀರನ್ನು ಕುಡಿದರೆ ಪ್ರಾಣಾಪಾಯ ಉಂಟಾಗುತ್ತದೆ. ಹಾಲನ್ನು ಪರೀಕ್ಷಿಸಿ ಹಾಲೆಂದು ತಿಳಿದ ಮೇಲೆ ಕುಡಿಯಬೇಕು. ಹಾಗೆಯೇ ಯಾವುದೇ ವ್ಯಕ್ತಿಯನ್ನು ಬೇಗ ನಂಬದೆ ಪ್ರಮಾಣಿಸಿ ನೋಡಬೇಕು ಎಂಬುದನ್ನು ಈ ಗಾದೆ ತಿಳಿಸುತ್ತದೆ.