“ದೇಶ ಸುತ್ತು; ಕೋಶ ಓದು”
ಗಾದೆಗಳು ವೇದಗಳಿಗೆ ಸಮ, ಗಾದೆಗಳು ಹಿರಿಯರ ಅನುಭವದ ನುಡಿಮುತ್ತುಗಳಾಗಿವೆ. ಇವು ನೀತಿ ಬೋಧಕವಾದವು ಹಾಗೂ ಮಾನವ ಜೀವನದಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಪ್ರಸ್ತುತ ಗಾದೆ “ದೇಶ ಸುತ್ತು; ಕೋಶ ಓದು”ಎಂಬುದು ಕನ್ನಡದ ಪ್ರಸಿದ್ಧ ಗಾದೆಗಳಲ್ಲಿ ಒಂದಾಗಿದೆ. ಎಲ್ಲಾ ಸ್ಥಳಗಳಲ್ಲಿ ಓಡಾಡಿದರೆ ಅಲ್ಲಿನ ರೀತಿ ನೀತಿ,ಒಳ್ಳೆಯದು, ಕೆಟ್ಟದ್ದು, ಯಾವ ರೀತಿಯ ಜನಗಳಿರುತ್ತಾರೆ ಎಂಬುದು ಅನುಭವವಾಗುತ್ತದೆ. ಈ ರೀತಿಯ ಅನುಭವ ನಮ್ಮ ಸುಖ ಜೀವನಕ್ಕೆ ನಾಂದಿಯಾಗುತ್ತದೆ. ಅದೇ ರೀತಿ ಎಲ್ಲಾ ರೀತಿಯ ಗ್ರಂಥಗಳನ್ನು ಓದಿ ಅರ್ಥ ಮಾಡಿಕೊಳ್ಳುವುದರಿಂದ ಜ್ಞಾನ ಪ್ರಾಪ್ತಿಯಾಗುತ್ತದೆ ಎಂಬುದು ಈ ಗಾದೆಯ ಅರ್ಥ. ಮನುಷ್ಯನು ಜ್ಞಾನವನ್ನು ಪಡೆಯಲು ಕೆಲವನ್ನು ಬಲ್ಲವರಿಂದ ಕಲಿಯಬೇಕು. ಕೆಲವನ್ನು ಶಾಸ್ತ್ರಗಳನ್ನು ಕೇಳಿ ತಿಳಿಯಬೇಕು. ಕೆಲವನ್ನು ಮಾಡುವವರನ್ನು ನೋಡಿ ಕಲಿಯಬೇಕು. ಹಾಗೆಯೇ ದೇಶವನ್ನು ಸುತ್ತಿ ಅನುಭವವನ್ನು ಪಡೆಯಬೇಕು. ಅಂದರೆ ಒಂದು ಕೋಶವನ್ನು ಓದಿ ಪಡೆಯುವ ಜ್ಞಾನದ ಜೊತೆಗೆ ದೇಶವನ್ನು ಸುತ್ತಿ ನೋಡಿದಾಗ ಜ್ಞಾನ ಇನ್ನೂ ವೃದ್ಧಿಯಾಗುತ್ತದೆ. ಮನುಷ್ಯನ ಬುದ್ಧಿಶಕ್ತಿಯ ಬೆಳವಣಿಗೆಗೆ ಪುಸ್ತಕಗಳಲ್ಲಿರುವ ಜ್ಞಾನದ ಜೊತೆಗೆ ದೇಶವನ್ನು ಸುತ್ತಿ ಅನುಭವ ಪಡೆಯುವುದು ಒಳ್ಳೆಯದು. ಶಾಸ್ತ್ರ ಜ್ಞಾನಕ್ಕಿಂತ ಲೋಕಜ್ಞಾನ ಮುಖ್ಯ ಎಂದು ಬಲ್ಲವರು
ಹೇಳುತ್ತಾರೆ. `ಓದು ಒಕ್ಕಾಲು ಬುದ್ಧಿ ಮುಕ್ಕಾಲು' ಎಂಬAತೆ ಪುಸ್ತಕಗಳನ್ನು ಓದುವ ಜ್ಞಾನದ ಜೊತೆಗೆ ದೇಶವನ್ನು ಸುತ್ತಿ ಜ್ಞಾನವನ್ನು ಬೆಳೆಸಿಕೊಳ್ಳಬೇಕು. ಪುಸ್ತಕದಲ್ಲಿ ನಾವು ಒಂದು ವಿಷಯದ ಬಗ್ಗೆ ಓದುತ್ತೇವೆ. ನಾವು ಸಂಪೂರ್ಣವಾಗಿ ತಿಳಿಯಲು ಸಾಧ್ಯವಿಲ್ಲ. ಆದರೆ ಪ್ರವಾಸ ಕೈಗೊಂಡಾಗ ನಾವು ಓದಿದ್ದಕ್ಕಿಂತ ಹೆಚ್ಚಿನ ಜ್ಞಾನ ಲಭಿಸುತ್ತದೆ. ಅಲ್ಲಿನ ಸ್ಥಳ, ಪರಿಸರ, ಅಲ್ಲಿನ ಜನರ ಆಚಾರ-ವಿಚಾರ, ವೇಷ ಭೂಷಣಗಳು, ಭಾಷೆ, ಅವರ ಸಾಮಾಜಿಕ, ಆರ್ಥಿಕ ಪರಿಸ್ಥಿತಿಗಳ ಬಗ್ಗೆ ನಮಗೆ ಅರಿವುಂಟಾಗುತ್ತದೆ. ಹಾಗೆಯೇ ಇತಿಹಾಸದಲ್ಲಿ
'ಹೊಯ್ಸಳರು' ಪಾಠವನ್ನು ಕೇಳಿದಾಗ ಪಡೆದ ಜ್ಞಾನಕ್ಕಿಂತಲೂ ಹೆಚ್ಚಿನ ಜ್ಞಾನವನ್ನು ಬೇಲೂರು, ಹಳೇಬೀಡು ಸ್ಥಳಗಳನ್ನು ನೋಡಿ ಪಡೆಯುತ್ತೇವೆ. ಆಗ ಬಾವಿಯ ಕಪ್ಪೆಗಳಂತಿರದೆ ನಾವು ವಿಶಾಲವಾಗಿ ಚಿಂತಿಸುತ್ತೇವೆ. ಇದರಿಂದ ಹೆಚ್ಚಿನ ಅರಿವು ಉಂಟಾಗುತ್ತದೆ. ಇದೇ ದೇಶ ಸುತ್ತು ಕೋಶ ಓದು ಎಂಬುದರ ಅರ್ಥವಾಗಿದೆ.