‘ಗಿಡವಾಗಿ ಬಗ್ಗದ್ದು; ಮರವಾಗಿ ಬಗ್ಗೀತೆ’
ಗಾದೆಗಳು ವೇದಗಳಿಗೆ ಸಮ, ಗಾದೆಗಳು ಹಿರಿಯರ ಅನುಭವದ ನುಡಿಮುತ್ತುಗಳಾಗಿವೆ. ಗಾದೆಗಳು ಆಕಾರದಲ್ಲಿ ವಾಮನನಾದರೂ ಅರ್ಥದಲ್ಲಿ ತ್ರಿವಿಕ್ರಮನಾಗಿವೆ. ವೇದ ಸುಳ್ಳಾದರೂ ಗಾದೆ ಸುಳ್ಳಾಗದು ಎಂಬ ಮಾತು ಗಾದೆಯ ಮಹತ್ತ÷್ವವನ್ನು ಬಹು ಸುಂದರವಾಗಿ ಅರ್ಥೈಸುತ್ತದೆ. ಪ್ರಸ್ತುತ ಗಾದೆ ‘ಗಿಡವಾಗಿ ಬಗ್ಗದ್ದು; ಮರವಾಗಿ ಬಗ್ಗೀತೆ’ ಇದು ಮನುಷ್ಯನ ಜೀವನ ಕ್ರಮಕ್ಕೆ ನೇರವಾಗಿ ಸಂಬAಧಿಸಿದೆ.
ಯಾವುದೇ ಗಿಡವನ್ನು ಚಿಕ್ಕದಾಗಿದ್ದಾಗ ಬಗ್ಗಿಸಬಹುದು. ಆದರೆ ಅದು ಮರವಾದ ಮೇಲೆ ಬಗ್ಗಿಸಲು ಹೋದರೆ ಅದು ಬಗ್ಗುವುದಿಲ್ಲ. ಬಲವಂತವಾಗಿ ಬಗ್ಗಿಸಲು ಹೋದರೆ ಅದು ಮುರಿದು ಹೋಗುತ್ತದೆ. ಹಾಗೆಯೇ ಮಕ್ಕಳು ಚಿಕ್ಕವರಿರುವಾಗಲೇ ಅವರಿಗೆ ಒಳಿತು ಕೆಡಕುಗಳ ಬಗ್ಗೆ ತಿಳಿಸಿ ಒಳ್ಳೆಯ ಅಭ್ಯಾಸಗಳನ್ನು ರೂಢಿಸಿಕೊಳ್ಳುವ ಹಾಗೆ ಮಾಡಬೇಕು. ‘ಮೂರು ವರ್ಷದಲ್ಲಿ ಕಲಿತದ್ದು ನೂರುವರ್ಷದ ತನಕ’ ಎಂದು ಹೇಳುವ ಹಾಗೆ ಸಣ್ಣ ವಯಸ್ಸಿನಲ್ಲಿ ರೂಢಿಸಿಕೊಂಡ ಅಭ್ಯಾಸಗಳು ದೊಡ್ಡವರಾದ ಮೇಲೂ ಹಾಗೆಯೇ ಉಳಿಯುತ್ತವೆ. ಸಣ್ಣ ವಯಸ್ಸಿನಲ್ಲಿ ಕೆಟ್ಟ ಅಭ್ಯಾಸಗಳನ್ನು ರೂಢಿಸಿಕೊಂಡರೆ ದೊಡ್ಡವರಾದ ಮೇಲೆ ಅವುಗಳನ್ನು ತಿದ್ದಲು ಸಾಧ್ಯವಾಗುವುದಿಲ್ಲ. ಆಗ ತಿದ್ದಲಿಕ್ಕೆ ಹೋದರೆ ಅನಾಹುತಗಳೇ ಹೆಚ್ಚಾ ಗುತ್ತವೆ. ಆದ್ದರಿಂದ ನಾವು ಬಾಲ್ಯದಲ್ಲಿರುವಾಗಲೇ ಮಕ್ಕಳಿಗೆ ಅವರು ಮಾಡುವ ಕೆಟ್ಟ ಕೆಲಸಗಳಿಗೆ ಪ್ರೋತ್ಸಾ ಹ ಕೊಡದೆ ತಿದ್ದಿ ಬುದ್ದಿ ಹೇಳಿ ಒಳ್ಳೆಯ ಮಾರ್ಗದಲ್ಲಿ ನಡೆಯುವ ಹಾಗೆ ಮಾಡಬೇಕು.ಪರಿಸ್ಥಿತಿಗಳೊಂದಿಗೆ ಹೊಂದಿಕೊಳ್ಳುವುದನ್ನು ಬಾಲ್ಯದಿಂದಲೂ ರೂಢಿಸಿಕೊಳ್ಳಬೇಕು. ಬಾಲ್ಯದಲ್ಲಿಯೇ ಒಳ್ಳೆಯ ಅಭ್ಯಾಸಗಳನ್ನು ಬೆಳೆಸಿಕೊಳ್ಳಬೇಕೆಂಬುದು ಈ ಗಾದೆಯ ಆಶಯವಾಗಿದೆ.