ಗ್ರಂಥಾಲಯಗಳ ಮಹತ್ವ :
ಪೀಠಿಕೆ:- ‘ಗ್ರಂಥಾಲಯಗಳು ಜ್ಞಾನದ ದೇಗುಲಗಳು’ ಒಂದು ಗ್ರಂಥಾಲಯ ಒಂದು ವಿಶ್ವವಿದ್ಯಾನಿಲಯವಿದ್ದಂತೆ. ಜ್ಞಾನ ಪಿಪಾಸುಗಳ ತೃಷೆಯನ್ನು ತಣಿಸುವ ಸಿಹಿನೀರಿನ ಸರೋವರಗಳು ಗ್ರಂಥಾಲಯಗಳು. ಗ್ರಂಥಾಲಯಗಳು ಕೇವಲ ಪುಸ್ತಕ ಭಂಡಾರವಲ್ಲ. ಪೀಳಿಗೆಯಿಂದ ಪೀಳಿಗೆಗೆ ಜ್ಞಾನವನ್ನು ಹಂಚುವ ಮಹತ್ತರವಾದ ಕಾರ್ಯಗಳನ್ನು ಗ್ರಂಥಾಲಯಗಳು ಮಾಡುತ್ತವೆ.
ವಿಷಯ ನಿರೂಪಣೆ :
ಗ್ರಂಥಾಲಯಗಳು ಜ್ಞಾನದಾನದ ಕೇಂದ್ರಗಳು. ಗ್ರಂಥಗಳನ್ನು ಓದಲು, ಆಕರ ಗ್ರಂಥಗಳನ್ನು ಬಳಸಲು, ಇಲ್ಲವೇ ಪುಸ್ತಕಗಳನ್ನು ಎರವಲು ರೂಪದಲ್ಲಿ ಪಡೆಯಲು ಬೇಕಾದ ಪುಸ್ತಕಗಳನ್ನು ಸಂಗ್ರಹಿಸಿರುವ ಸ್ಥಳವೇ ಗ್ರಂಥಾಲಯಗಳು. ಮಧ್ಯಯುಗದಲ್ಲಿ ಗ್ರಂಥಾಲಯಗಳು ಕಾಣಿಸಿಕೊಂಡವು. ಗ್ರಂಥಾಲಯಗಳಲ್ಲಿ ಅನೇಕ ಭಾಷೆಗಳಿಗೆ, ಅನೇಕ ವಿಷಯಗಳಿಗೆ ಸಂಬAಧಿಸಿದ ಪುಸ್ತಕಗಳು ದೊರೆಯುತ್ತವೆ. ಹಿಂದಿನ ಕಾಲದಲ್ಲಿ ಗ್ರಂಥಾಲಯಗಳು ಇಲ್ಲದ್ದರಿಂದ ಜ್ಞಾನವನ್ನು ಸಂಪಾದಿಸಲು ಕಷ್ಟಪಡಬೇಕಾಗಿತ್ತು. ಈಗ ನಮಗೆ ಬೇಕಾದ ವಿಷಯಗಳನ್ನು ಅಧ್ಯಯನ ಮಾಡಲು, ನಮಗೆ ಬೇಕಾದಾಗ ಹೋಗಿ, ಪುಸ್ತಕ ಪಡೆದು ಓದಿ, ಬಹು ಸುಲಭವಾಗಿ ಜ್ಞಾನಸಂಪಾದನೆಯನ್ನು ಮಾಡಬಹುದು. ಕೆಲವರಿಗೆ ಹಣಕೊಟ್ಟು ಪುಸ್ತಕಗಳನ್ನು ಕೊಂಡುಕೊಳ್ಳಲು ಸಾಧ್ಯವಾಗುವುದಿಲ್ಲ. ಅಂತಹವರು ಗ್ರಂಥಾಲಯಗಳಲ್ಲಿ ಪುಸ್ತಕಗಳನ್ನು ತೆಗೆದುಕೊಂಡು ಅಧ್ಯಯನ ಮಾಡಿ, ಹಿಂದಿರುಗಿಸಬಹುದು. ಲೇಖಕರಿಗೂ, ಸಂಶೋಧಕರಿಗೂ, ವಿದ್ಯಾರ್ಥಿಗಳಿಗೂ ಗ್ರಂಥಾಲಯಗಳು ಬಹಳ ಉಪಯೋಗವಾಗುತ್ತವೆ. ಗ್ರಂಥಾಲಯಗಳು ಓದುವ ಹವ್ಯಾಸವನ್ನು ಬೆಳೆಸುವಲ್ಲಿ ಮಹತ್ತರವಾದ ಪಾತ್ರವನ್ನು ವಹಿಸುತ್ತವೆ. ವಿರಾಮಕಾಲದ ಸದುಪಯೋಗ ಮಾಡಿಕೊಳ್ಳಲು ಗ್ರಂಥಾಲಯ ಉತ್ತಮ ತಾಣ. ಸರ್ಕಾರವು ಸಾರ್ವಜನಿಕ ಗ್ರಂಥಾಲಯಗಳನ್ನು ಗ್ರಾಮಪಂಚಾಯಿತಿ ಮಟ್ಟದಿಂದ ರಾಜ್ಯಮಟ್ಟದವರೆಗೂ ಸ್ಥಾಪಿಸಿ, ಉಚಿತವಾಗಿ ಜನರಿಗೆ ಪುಸ್ತಕಗಳನ್ನು ಓದಲು, ಎರವಲು ಪಡೆಯಲು ಅವಕಾಶ ಮಾಡಿಕೊಟ್ಟಿದೆ. ಇವುಗಳನ್ನು ಸಮರ್ಪಕವಾಗಿ ಬಳಸಿಕೊಳ್ಳುವುದರಿಂದ ನಮ್ಮ ಜ್ಞಾನಾರ್ಜನೆಯು ಹೆಚ್ಚಾಗುತ್ತದೆ.
ಉಪಸಂಹಾರ : ನಾವು ಗ್ರಂಥಾಲಯಗಳನ್ನು ಸದ್ಬಳಕೆ ಮಾಡಿಕೊಳ್ಳುವ ಮನೋಭಾವವನ್ನು ಬೆಳೆಸಿಕೊಳ್ಳಬೇಕು. ಶಾಲಾ ಗ್ರಂಥಾಲಯದಲ್ಲಿ ಇರುವ ಪುಸ್ತಕಗಳನ್ನು ಎರವಲು ಪಡೆದು ಓದುವ ಹವ್ಯಾಸವನ್ನು ನಮ್ಮದಾಗಿಸಿಕೊಳ್ಳಬೇಕು. ಸಾರ್ವಜನಿಕ ಗ್ರಂಥಾಲಯಗಳಿಗೆ ಭೇಟಿ ನೀಡಿ, ಪುಸ್ತಕಗಳನ್ನು ಪಡೆದು ಓದುವ ಆಸಕ್ತಿಯನ್ನು ಬೆಳೆಸಿಕೊಳ್ಳಬೇಕು. ವಿರಾಮಕಾಲದಲ್ಲಿ ಗ್ರಂಥಾಲಯಗಳಿಗೆ ಭೇಟಿ ನೀಡಿ, ಅಲ್ಲಿರುವ ಗ್ರಂಥಗಳ ಅವಲೋಕನ ಮಾಡಬೇಕು. ಗ್ರಂಥಾಲಯಗಳು ನಮಗೆ ಬೇಕಾದ ಜ್ಞಾನವನ್ನು ಕೊಡಲು ಸಿದ್ಧವಾಗಿವೆ. ಅವುಗಳ ಉಪಯೋಗವನ್ನು ಪಡೆಯಬೇಕೆಂಬ ಮನಸ್ಸು ನಮಗಿರಬೇಕು. ಆಗ ಮಾತ್ರ ಗ್ರಂಥಾಲಯಗಳ ಮಹತ್ತ÷್ವ ನಮಗೆ ತಿಳಿಯುತ್ತದೆ.