ಪದ್ಯಪಾಠ-೭ ವೀರಲವ
ಕವಿ ಪರಿಚಯ- ಲಕ್ಷ್ಮೀಶ
ಕವಿ ಲಕ್ಷ್ಮೀಶನು ಕ್ರಿ. ಶ. ಸುಮಾರು ೧೫೫೦ರಲ್ಲಿ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ದೇವನೂರಿನಲ್ಲಿ ಜನಿಸಿದನು. ಇವನಿಗೆ ಲಕ್ಷ್ಮೀ ರಮಣ, ಲಕ್ಷ್ಮೀ ಪತಿ ಎಂಬ ಹೆಸರುಗಳೂ ಇದ್ದವು. ಇವನು ‘ಜೈಮಿನಿ ಭಾರತ’ ಎಂಬ ಪ್ರಸಿದ್ಧ ಕಾವ್ಯವನ್ನು ರಚಿಸಿದ್ದಾನೆ. ಈತನಿಗೆ ಉಪಮಾಲೋಲ, ಕರ್ಣಾಟ ಕವಿಚೂತವನಚೈತ್ರ ಎಂಬ ಬಿರುದುಗಳನ್ನು ನೀಡಿ ಗೌರವಿಸಲಾಗಿದೆ.
ಅ] ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ.
೧. ‘ಜೈಮಿನಿ ಭಾರತ’ ಕಾವ್ಯವನ್ನು ಬರೆದ ಕವಿ ಯಾರು?
‘ಜೈಮಿನಿ ಭಾರತ’ ಕಾವ್ಯವನ್ನು ಬರೆದ ಕವಿ ಲಕ್ಷ್ಮೀ.
೨. ಯಜ್ಞಾಶ್ವವನ್ನು ಕಟ್ಟಿದವರು ಯಾರು?
ಯಜ್ಞಾಶ್ವವನ್ನು ಕಟ್ಟಿದವರು ಲವ.
೩. ಕುದುರೆಯನ್ನು ಲವನು ಯಾವುದರಿಂದ ಕಟ್ಟಿದನು?
ಕುದುರೆಯನ್ನು ಲವನು ತನ್ನ ಉತ್ತರೀಯದಿಂದ ಕಟ್ಟಿದನು.
೪. ಮುನಿಸುತರು ಹೆದರಲು ಕಾರಣವೇನು?
ಲವನು ಯಜ್ಞಾಶ್ವವನ್ನು ಕಟ್ಟಿ ಹಾಕಿದ್ದರಿಂದ ಮುನಿಸುತರು ಹೆದರಿದರು.
೫. ರಘೂದ್ವಹನ ಹೆಸರು ಕೇಳಿ ಯಾರು ಅಂಜುತ್ತಿದ್ದರು?
ರಘೂದ್ವಹನ ಹೆಸರು ಕೇಳಿ ದೊಡ್ಡದೊಡ್ಡ ರಾಜರು ಅಂಜುತ್ತಿದ್ದರು.
೬. ಯಜ್ಞಾಶ್ವವು ಯಾರ ಉಪವನವನ್ನು ಪ್ರವೇಶಿಸಿತು?
ಯಜ್ಞಾಶ್ವವು ವಾಲ್ಮೀಕಿಯ ನಿಜಾಶ್ರಮದ ಉಪವನವನ್ನು ಪ್ರವೇಶಿಸಿತು.
೭. ವಾಲ್ಮೀಕಿ ಮುನಿಗಳು ಎಲ್ಲಿಗೆ ಹೋಗಿದ್ದರು?
ವಾಲ್ಮೀಕಿ ಮುನಿಗಳು ವರುಣನ ಲೋಕಕ್ಕೆ ಹೋಗಿದ್ದರು.
೮. ಕೌಸಲ್ಯೆಯ ಮಗ ಯಾರು?
ಕೌಸಲ್ಯೆ ಮಗ ರಾಮ.
೯. ಲವಕುಶರು ಯಾರ ಮಕ್ಕಳು?
ಲವಕುಶರು ರಾಮ ಸೀತೆಯ ಮಕ್ಕಳು.
೧೦. ಲವನು ಕುದುರೆಯನ್ನು ಯಾವುದಕ್ಕೆ ಕಟ್ಟಿದನು?
ಲವನು ಕುದುರೆಯನ್ನು ಕದಳೀದ್ರುಮಕೆ ಕಟ್ಟಿದನು.
೧೧. ತೋಟದ ಕಾವಲಿಗೆ ಯಾರನ್ನು ನೇಮಿಸಲಾಗಿತ್ತು?
ತೋಟದ ಕಾವಲಿಗೆ ಲವನನ್ನು ನೇಮಿಸಲಾಗಿತ್ತು.
೧೨. ಯಜ್ಞಾಶ್ವದ ಬೆಂಗಾವಲಿಗೆ ಬಂದವನು ಯಾರು?
ಯಜ್ಞಾಶ್ವದ ಬೆಂಗಾವಲಿಗೆ ಬಂದವನು ಶತ್ರುಘ್ನ.
ಆ] ಮೂರು-ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿ.
೧. ವಾಲ್ಮೀಕಿ ಆಶ್ರಮಕ್ಕೆ ಯಜ್ಞಾಶ್ವವು ಬಂದ ಬಗೆಯನ್ನು ವಿವರಿಸಿ.
ಶ್ರೀರಾಮನು ಮಹರ್ಷಿಗಳ ಆದೇಶದಂತೆ ಅಶ್ವಮೇಧಯಾಗವನ್ನು ಕೈಗೊಂಡು, ಶತ್ರುಘ್ನನ ಬೆಂಗಾವಲಿನಲ್ಲಿ ಯಜ್ಞಾಶ್ವವನ್ನು ಕಳುಹಿಸಿದನು. ರಾಮನ ಆಜ್ಞೆಯಂತೆ ಹೊರಟ ಯಜ್ಞಾಶ್ವವನ್ನು ಭುಜಬಲ ಪರಾಕ್ರಮಿಗಳಾದ ರಾಜರುಗಳು ತಡೆಯಲು ಹೆದರಿ ನಮಸ್ಕರಿಸಿ ಮುಂದೆ ಹೋಗಲು ಬಿಟ್ಟರು. ಹೀಗೆ ಯಜ್ಞಾಶ್ವವು ಭೂಮಿಯಲ್ಲೆಲ್ಲ ಸಂಚರಿಸುತ್ತ ವಾಲ್ಮೀಕಿಯ ಆಶ್ರಮದ ತೋಟದ ಹಸುರಾದ ಹುಲ್ಲನ್ನು ತಿನ್ನಲು ಒಳಹೊಕ್ಕಿತು.
೨. ಯಜ್ಞಾಶ್ವದ ಹಣೆಯಲ್ಲಿದ್ದ ಪಟ್ಟಿಯಲ್ಲಿ ಏನೆಂದು ಬರೆಯಲಾಗಿತ್ತು?
ಯಜ್ಞಾಶ್ವದ ಹಣೆಯಲ್ಲಿದ್ದ ಪಟ್ಟಿಯಲ್ಲಿ “ಭೂಮಂಡಲದಲ್ಲಿ ಕೌಸಲ್ಯೆಯ ಮಗನಾದ ರಾಮನು ಒಬ್ಬನೇ ವೀರನು ಇದು ಅವನ ಯಜ್ಞದಕುದುರೆ ಇದನ್ನು ತಡೆಯುವ ಸಾಮರ್ಥ್ಯವುಳ್ಳವರು ಯಾರೇ ಆದರು ತಡೆಯಲಿ” ಎಂದ ಬರೆಯಲಾಗಿತ್ತು.
೩. ಕುದುರೆಯನ್ನು ಕಟ್ಟುವ ವಿಚಾರದಲ್ಲಿ ಮುನಿಸುತರಿಗೂ ಲವನಿಗೂ ನಡೆದ ಸಂವಾದವನ್ನು ಬರೆಯಿರಿ.
ಲವನು ಆಶ್ರಮವನ್ನು ಹೊಕ್ಕ ಯಜ್ಞಾಶ್ವವನ್ನು ತನ್ನ ಉತ್ತರೀಯದಿಂದ ಬಾಳೆಯ ಗಿಡಕ್ಕೆ ಕಟ್ಟಿ ಹಾಕಿದ್ದನು. ಇದನ್ನು ಕಂಡು ಹೆದರಿದ ಮುನಿಸುತರು “ಬೇಡಬೇಡ ಅರಸುಗಳ ಕುದುರೆಯನ್ನು ಬಿಡು, ನಮ್ಮನ್ನು ಹೊಡೆಯುವರು” ಎಂದು ಹೇಳಿದರು. ಆಗ ಲವನು ನಗುತ “ಬ್ರಾಹ್ಮಣರ ಮಕ್ಕಳು ಹೆದರಿದರೆ ಜಾನಕಿಯ ಮಗನು ಇದಕ್ಕೆ ಹೆದರುವನೇ, ನೀವು ಹೋಗಿ” ಎಂದು ಶೌರ್ಯದಿಂದ ಹೇಳಿದನು.
ಇ] ಎಂಟು-ಹತ್ತು ವಾಕ್ಯಗಳಲ್ಲಿ ಉತ್ತರಿಸಿ.
೧. ಲವನು ಯಜ್ಞಾಶ್ವವನ್ನು ಕಟ್ಟಲು ಕಾರಣವೇನು?
ಶ್ರೀರಾಮನು ಮಹರ್ಷಿಗಳ ಆದೇಶದಂತೆ ಅಶ್ವಮೇಧಯಾಗವನ್ನು ಕೈಗೊಂಡು, ಶತ್ರುಘ್ನನ ಬೆಂಗಾವಲಿನಲ್ಲಿ ಯಜ್ಞಾಶ್ವವನ್ನು ಕಳುಹಿಸಿದನು. ರಾಮನ ಆಜ್ಞೆಯಂತೆ ಹೊರಟ ಯಜ್ಞಾಶ್ವವನ್ನು ಭುಜಬಲ ಪರಾಕ್ರಮಿಗಳಾದ ರಾಜರುಗಳು ತಡೆಯಲು ಹೆದರಿ ನಮಸ್ಕರಿಸಿ ಮುಂದೆ ಹೋಗಲು ಬಿಟ್ಟರು. ಹೀಗೆ ಯಜ್ಞಾಶ್ವವು ಭೂಮಿಯಲ್ಲೆಲ್ಲ ಸಂಚರಿಸುತ್ತ ವಾಲ್ಮೀಕಿಯ ಆಶ್ರಮದ ತೋಟದ ಹಸುರಾದ ಹುಲ್ಲನ್ನು ತಿನ್ನಲು ಒಳಹೊಕ್ಕಿತು. ಆಗ ಇದನ್ನು ಕಂಡ ಲವನು “ಇದು ಯಾವ ಕಡೆಯ ಕುದುರೆಯು, ಹೊಕ್ಕು, ಹೂತೋಟವನ್ನು ನುಗ್ಗುನುರಿಯಾಗುವಂತೆ ತುಳಿದುದು” ಎಂದು ಕುದುರೆಯ ಕಡೆಗೆ ನಡೆದು ಬಂದು ನೋಡಿದನು. ಯಜ್ಞಾಶ್ವದ ಹಣೆಯಲ್ಲಿದ್ದ ಪಟ್ಟಿಯಲ್ಲಿ “ಭೂಮಂಡಲದಲ್ಲಿ ಕೌಸಲ್ಯೆಯ ಮಗನಾದ ರಾಮನು ಒಬ್ಬನೇ ವೀರನು, ಇದು ಅವನ ಯಜ್ಞದಕುದುರೆ. ಇದನ್ನು ತಡೆಯುವ ಸಾಮರ್ಥ್ಯವುಳ್ಳವರು ಯಾರೇ ಆದರು ತಡೆಯಲಿ” ಎಂದು ಬರೆಯಲಾಗಿತ್ತು. ಇದನ್ನು ಓದಿದ ಲವನು ಕೋಪಗೊಂಡು “ಅಹಂಕಾರವನ್ನು ಬಿಡಿಸದಿದ್ದರೆ ತನ್ನ ತಾಯಿಯನ್ನು ಎಲ್ಲ ಜನರೂ ಬಂಜೆ ಎನ್ನದಿರುವರೇ, ತನಗಿರುವ ತೋಳುಗಳು ಇವು ಏತಕೆ?” ಎಂದು ಪ್ರತಿಜ್ಞೆಯನ್ನು ಕೈಗೊಂಡು, ಯಜ್ಞಾಶ್ವವನ್ನು ತನ್ನ ಉತ್ತರೀಯದಿಂದ ಕಟ್ಟಿಹಾಕಿದನು.
೨. ಲವನ ನಡೆವಳಿಕೆ ಮೆಚ್ಚುಗೆಯಾಯಿತೇ? ಏಕೆ?
ಲವನು ಬಾಲಕನಾಗಿದ್ದರೂ ಸ್ವಾಭಿಮಾನಿ. ಅವನ ಮಾತುಗಳು ವೀರೋಚಿತ. ಆತನ ಮಾತೃಪ್ರೇಮ ಅನನ್ಯ. ವಾಲ್ಮೀಕಿ ಮಹರ್ಷಿಗಳು ಆಶ್ರಮದಿಂದ ಹೊರಗೆ ಹೋಗುವಾಗ ಲವನಿಗೆ ಆಶ್ರಮದ ಜವಾಬ್ದಾರಿಯನ್ನು ವಹಿಸಿರುತ್ತಾರೆ. ಇಂತಹ ಸಮಯದಲ್ಲಿ ರಾಮನ ಯಜ್ಞಾಶ್ವವು ಆಶ್ರಮವನ್ನು ಪ್ರವೇಶಿಸಿ ಹೂದೋಟವನ್ನು ಹಾಳುಮಾಡುತ್ತದೆ. ಇದನ್ನು ಕಂಡು ಲವನು ಕುದುರೆಯ ಬಳಿ ಬಂದು, ಕುದುರೆಯ ನೆತ್ತಿಯ ಮೇಲೆ ಮೆರೆಯುತ್ತಿದ್ದ ಪಟ್ಟದ ಲಿಖಿತವನ್ನು ಓದುತ್ತಾನೆ. ಪಟ್ಟದ ಲಿಖಿತದಲ್ಲಿ ರಾಮನೊಬ್ಬನೇ ಜಗತ್ತಿಗೆ ವೀರನೆಂಬ ವಾಕ್ಯವನ್ನು ಕಂಡು ಕೆರಳಿ, ಇವನ ಗರ್ವವನ್ನು ಬಿಡಿಸುತ್ತೇನೆ, ಇಲ್ಲದಿದ್ದಲ್ಲಿ ನನ್ನ ತಾಯಿಯನ್ನು ಎಲ್ಲರೂ ಹೇಡಿಯನ್ನು ಹೆತ್ತವಳೆಂದು ದೂರಿಬಿಡುತ್ತಾರೆ ಎಂದು ಚಿಂತಿಸಿ, ತನ್ನ ತೋಳ್ಬಲವನ್ನು ತೋರಿಸಿಬಿಡುತ್ತೇನೆ ಎಂದು ಕುದುರೆಯನ್ನು ಕಟ್ಟಿಹಾಕುತ್ತಾನೆ. ಋಷಿ ಮುನಿಗಳ ಮಕ್ಕಳು ಹೆದರಿಕೆಯಿಂದ ಬೇಡವೆಂದಾಗ, “ಬ್ರಾಹ್ಮಣರ ಮಕ್ಕಳು ಯುದ್ಧಕ್ಕೆ ಹೆದರಿದರೆ, ಜಾನಕಿಯ ಸುತನು ಹೆದರುವನೇ?” ಎಂದು ವೀರನಂತೆ ಬಿಲ್ಲಿನ ಹೆದೆಯೇರಿಸಿ ಠೇಂಕಾರವನ್ನು ಮಾಡಿ ನಿಂತನು. ಇಂತಹ ವೀರ ಬಾಲಕನ ಶೌರ್ಯ, ತಾಯಿಯ ಮೇಲಿನ ಮಮತೆ, ದುರಹಂಕಾರವನ್ನು ಮೆಟ್ಟುವ ಸಾಹಸ ಎಂಥವರಿಗೂ ಮೆಚ್ಚುಗೆಯಾಗುತ್ತದೆ.
ಈ] ಸಂದರ್ಭ ಸಹಿತ ಸ್ವಾರಸ್ಯ ತಿಳಿಸಿ.
೧. “ರಘೂದ್ವಹನ ಸೊಲ್ಗೇಳಿ ನಮಿಸಲ್”
ಆಯ್ಕೆ : ಈ ವಾಕ್ಯವನ್ನು ಕವಿ ಲಕ್ಷ್ಮೀಶನು ರಚಿಸಿರುವ ‘ಜೈಮಿನಿ ಭಾರತ’ ಮಹಾಕಾವ್ಯದಿಂದ ಆಯ್ದ ‘ವೀರಲವ’ ಎಂಬ ಪದ್ಯಭಾಗದಿಂದ ಆರಿಸಲಾಗಿದೆ.
ಸಂದರ್ಭ : ಶ್ರೀರಾಮನ ಅಶ್ವಮೇಧ ಯಾಗದ ಯಜ್ಞಾಶ್ವವು ಸಂಚರಿಸಿದ ಕಡೆಯಲ್ಲೆಲ್ಲ ರಾಜರುಗಳಿಂದ ಅದಕ್ಕೆ ದೊರೆತ ಭವ್ಯ ಸ್ವಾಗತ ಹಾಗೂ ನೀಡಿದ ಗೌರವವನ್ನು ಕುರಿತು ವರ್ಣಿಸುವ ಸಂದರ್ಭದಲ್ಲಿ ಕವಿಯು ಈ ಮಾತನ್ನು ಹೇಳುತ್ತಾನೆ.
ಸ್ವಾರಸ್ಯ : ಶ್ರೀರಾಮನ ಹೆಸರನ್ನು ಕೇಳಿಯೇ ಪರಾಕ್ರಮಿಗಳಾದ ರಾಜರುಗಳು ಗೌರವದಿಂದ ನಮಿಸಿ ಶರಣಾಗಿ ಯಜ್ಞಾಶ್ವವು ಮುಂದೆ ಸಂಚರಿಸಲು ಅನುವು ಮಾಡಿಕೊಟ್ಟರು ಎಂದು ವರ್ಣಿಸಿರುವುದು ಸ್ವಾರಸ್ಯಪೂರ್ಣವಾಗಿದೆ.
೨. “ತನ್ನ ಮಾತೆಯಂ ಸರ್ವಜನಮುಂ ಬಂಜೆಯೆನ್ನದಿರ್ದಪುದೆ”
ಆಯ್ಕೆ : ಈ ವಾಕ್ಯವನ್ನು ಕವಿ ಲಕ್ಷ್ಮೀಶನು ರಚಿಸಿರುವ ‘ಜೈಮಿನಿ ಭಾರತ’ ಮಹಾಕಾವ್ಯದಿಂದ ಆಯ್ದ ‘ವೀರಲವ’ ಎಂಬ ಪದ್ಯಭಾಗದಿಂದ ಆರಿಸಲಾಗಿದೆ.
ಸಂದರ್ಭ : ಲವನು ತನ್ನ ಆಶ್ರಮದ ತೋಟವನ್ನು ಧ್ವಂಸ ಮಾಡಿದ ಶ್ರೀರಾಮನ ಯಜ್ಞಾಶ್ವದ ಹಣೆಯಲ್ಲಿದ್ದ ಪಟ್ಟದ ಬರೆಹವನ್ನು ಓದಿ ಅದನ್ನು ಕಟ್ಟಿಹಾಕಲು ನಿರ್ಧರಿಸಿದ ಸಂದರ್ಭದಲ್ಲಿ ಈ ಮಾತನ್ನು ಹೇಳುತ್ತಾನೆ.
ಸ್ವಾರಸ್ಯ : ಕ್ಷತ್ರಿಯನಾದ ವೀರಲವನು ಬಾಲಕನಾದರೂ ಹೆದರದೆ ಕುದುರೆಯನ್ನು ಕಟ್ಟಲು ನಿರ್ಧರಿಸಿ, ತನ್ನ ವೀರತ್ವವನ್ನು ಪ್ರದರ್ಶಿಸುವುದು ಈ ಮಾತಿನಲ್ಲಿ ಸ್ವಾರಸ್ಯಪೂರ್ಣವಾಗಿ ಅಭಿವ್ಯಕ್ತಗೊಂಡಿದೆ.
೩. “ಅರಸುಗಳ ವಾಜಿಯಂ ಬಿಡು”
ಆಯ್ಕೆ : ಈ ವಾಕ್ಯವನ್ನು ಕವಿ ಲಕ್ಷ್ಮೀಶನು ರಚಿಸಿರುವ ‘ಜೈಮಿನಿ ಭಾರತ’ ಮಹಾಕಾವ್ಯದಿಂದ ಆಯ್ದ ‘ವೀರಲವ’ ಎಂಬ ಪದ್ಯಭಾಗದಿಂದ ಆರಿಸಲಾಗಿದೆ.
ಸಂದರ್ಭ : ವೀರಲವನು ತನ್ನ ಉತ್ತರೀಯದಿಂದ ಶ್ರೀರಾಮನ ಯಜ್ಞಾಶ್ವವನ್ನು ಬಾಳೆಯಗಿಡಕ್ಕೆ ಕಟ್ಟಿಹಾಕಿದ ಸಂದರ್ಭದಲ್ಲಿ ನಡುಗುತ್ತಾ ಹೆದರಿ ಮುನಿಪುತ್ರರು ಈ ಮಾತನ್ನು ಹೇಳುತ್ತಾರೆ.
ಸ್ವಾರಸ್ಯ : ರಾಜನ ಯಜ್ಞಾಶ್ವವನ್ನು ಕಟ್ಟಿಹಾಕುವುದು ಅಪರಾಧ ಅದರಿಂದ ಮುಂದೆ ತೊಂದರೆ ಉಂಟಾಗುತ್ತದೆ ಎಂದು ಮುನಿಪುತ್ರರು ಭಯಗೊಳ್ಳುವುದನ್ನು ಈ ಮಾತಿನಲ್ಲಿ ಸ್ವಾರಸ್ಯಪೂರ್ಣವಾಗಿ ವರ್ಣಿಸಲಾಗಿದೆ.
೪. “ಜಾನಕಿಯ ಮಗನಿದಕೆ ಬೆದರುವನೆ”
ಆಯ್ಕೆ : ಈ ವಾಕ್ಯವನ್ನು ಕವಿ ಲಕ್ಷ್ಮೀಶನು ರಚಿಸಿರುವ ‘ಜೈಮಿನಿ ಭಾರತ’ ಮಹಾಕಾವ್ಯದಿಂದ ಆಯ್ದ ‘ವೀರಲವ’ ಎಂಬ ಪದ್ಯಭಾಗದಿಂದ ಆರಿಸಲಾಗಿದೆ.
ಸಂದರ್ಭ : ವೀರಲವನು ತನ್ನ ಉತ್ತರೀಯದಿಂದ ಯಜ್ಞಾಶ್ವವನ್ನು ಬಾಳೆಯಗಿಡಕ್ಕೆ ಕಟ್ಟಿ ಹಾಕಿದ್ದನ್ನು ಕಂಡು ಮುನಿಪುತ್ರರು ಕುದುರೆಯನ್ನು ಬಿಡು ಎಂದು ಹೇಳಿದ ಸಂದರ್ಭದಲ್ಲಿ ಈ ಮಾತನ್ನು ಲವನು ಹೇಳುತ್ತಾನೆ.
ಸ್ವಾರಸ್ಯ : ಸೀತೆಯ ಮಗನಾದ ಲವನ ಧೈರ್ಯವು ಈ ಮಾತಿನಲ್ಲಿ ಸ್ವಾರಸ್ಯಪೂರ್ಣವಾಗಿ ವ್ಯಕ್ತವಾಗಿದೆ.